ಸಲ್ಮಾನ್ ಹಿಟ್ ಅಂಡ್ ರನ್: ತೀರ್ಪು ಜೂನ್ 24ಕ್ಕೆ ಮುಂದೂಡಿಕೆ
ಬಾಲಿವುಡ್ ನಟ ಸಲ್ಮಾನ್‌ಖಾನ್ ಅವರ ಹಿಟ್ ಅಂಡ್ ರನ್ ಪ್ರಕರಣದ ವಿಚಾರಣೆಯ ತೀರ್ಪನ್ನು ಮುಂಬೈ ಸೆಷನ್ಸ್...
ಮುಂಬೈ: ಬಾಲಿವುಡ್ ನಟ ಸಲ್ಮಾನ್‌ಖಾನ್ ಅವರ ಹಿಟ್ ಅಂಡ್ ರನ್ ಪ್ರಕರಣದ ವಿಚಾರಣೆಯ ತೀರ್ಪನ್ನು ಮುಂಬೈ ಸೆಷನ್ಸ್ ನ್ಯಾಯಾಲಯ ಜೂನ್ 24ಕ್ಕೆ ಮುಂದೂಡಿದೆ.
2002ರ ಹಿಟ್ ಅಂಡ್ ರನ್ ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾ.ಯು.ಬಿ. ಹೆಜಿಬ್ ಅವರು, ಪ್ರಕರಣದ ತೀರ್ಪನ್ನು ಜೂನ್ 24ಕ್ಕೆ ಮುಂದೂಡಿದ್ದಾರೆ. ಈ ಹಿಂದೆ ಪ್ರಕರಣದ ಅಂತಿಮ ತೀರ್ಪನ್ನು ನ್ಯಾಯಾಲಯ ಇಂದು ಘೋಷಣೆ ಮಾಡುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಸಲ್ಮಾನ್ ಖಾನ್ ಪರ ವಕೀಲ ಅಶೋಕ್ ಮುಂಡರಗಿ ಅವರು ಘಟನೆಯಲ್ಲಿ ತಮ್ಮ ಕಕ್ಷೀದಾರನ ಯಾವುದೇ ತಪ್ಪಿಲ್ಲ. ನಿರ್ಲಕ್ಷ್ಯದಿಂದಾಗಿ ಈ ಘಟನೆ ಸಂಭವಿಸಿದೆ. ಹೀಗಾಗಿ ತಮ್ಮ ಕಕ್ಷೀದಾರನನ್ನು ಕೊಲೆ ಪ್ರಕರಣದಿಂದ ಕೈ ಬಿಡಬೇಕು ಎಂದು ಕೋರಿದ್ದರು.
ಈ ಹಿಂದೆ ಇದೇ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಮುಂಬೈ ಸೆಷನ್ಸ್ ನ್ಯಾಯಾಲಯ ಸಲ್ಮಾನ್ ಖಾನ್ ವಿರುದ್ಧ ಐಪಿಸಿ ಸೆಕ್ಷನ್ 304(3)ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿ ಪ್ರಕರಣದ ಮರು ತನಿಖೆ ನಡೆಸುವಂತೆ ಮುಂಬೈ ಪೊಲೀಸರಿಗೆ ಆದೇಶಿಸಿತ್ತು. ನ್ಯಾಯಾಲಯದ ಆದೇಶದ ವಿರುದ್ಧ ಸಲ್ಮಾನ್ ಖಾನ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ತಮ್ಮ ಪ್ರಕರಣವನ್ನು ಭಾರತೀಯ ದಂಡಸಂಹಿತೆ 304(ಎ)(ನಿರ್ಲಕ್ಷ್ಯದಿಂದ ಸಾವಿಗೆ ಕಾರಣರಾಗುವುದು)ರ ಅಡಿಯಲ್ಲಿಯೇ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇದುವರೆವಿಗೂ ಪ್ರಮುಖ 17 ಸಾಕ್ಷಿಗಳ ಮೌಖಿಕ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಅಲ್ಲದೆ ಐಪಿಸಿ ಸೆಕ್ಷನ್ 304(3)ರ ಅಡಿಯಲ್ಲಿಯೇ ವಿಚಾರಣೆ ನಡೆಸುವುದಾಗಿ ಹೇಳಿದೆ. ಒಂದು ವೇಳೆ ವಿಚಾರಣೆ ಪೂರ್ಣಗೊಂಡು ಸಲ್ಮಾನ್ ಖಾನ್ ವಿರುದ್ಧ ತೀರ್ಪು ಪ್ರಕಟವಾದರೆ ಸಲ್ಮಾನ್‌ಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
2002ರಲ್ಲಿ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ನಟ ಸಲ್ಮಾನ್ ಖಾನ್ ಅವರು ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿದ್ದರು. ಮತ್ತಿನಲ್ಲಿದ್ದ ಅವರು ತಮ್ಮ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡು ಫುಟ್‌ಬಾತ್ ಮೇಲೆ ಕಾರನ್ನು ಚಲಾಯಿಸಿದ್ದರು. ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟು, ನಾಲ್ವರಿಗೆ ಗಂಭೀರ ಗಾಯಗಳಾಗಿದ್ದವು.