ಅಡ್ವಾಣಿ ರಾಜಿನಾಮೆ ವಾಪಸ್
ಬಿಜೆಪಿಯ ಆಂತರಿಕ ಬಿಕ್ಕಟ್ಟು ಶಮನಗೊಂಡಿದ್ದು, ಅಡ್ವಾಣಿ ಅವರು ತಮ್ಮ ರಾಜಿನಾಮೆ ನಿರ್ಧಾರವನ್ನು ಹಿಂಪಡೆದಿದ್ದಾರೆ.
ನವದೆಹಲಿ: ಬಿಜೆಪಿಯಲ್ಲಿ ಎದ್ದಿದ್ದ ಆಂತರಿಕ ಬಿಕ್ಕಟ್ಟು ಶಮನಗೊಂಡಿದ್ದು, ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ತಮ್ಮ ರಾಜಿನಾಮೆ ನಿರ್ಧಾರವನ್ನು ಹಿಂಪಡೆದಿದ್ದಾರೆ.
ರಾಜಿನಾಮೆ ವಿಚಾರ ತಿಳಿಯುತ್ತಿದ್ದಂತೆಯೇ ಅಡ್ವಾಣಿ ಅವರ ಮನವೊಲಿಸಲು ಶತ ಪ್ರಯತ್ನ ನಡೆಸುತ್ತಿದ್ದ ಬಿಜೆಪಿ ನಾಯಕರು ಇಂದು ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು, ಅಡ್ವಾಣಿ ಅವರು ತಮ್ಮ ರಾಜಿನಾಮೆ ನಿರ್ಧಾರವನ್ನು ಹಿಂಪಡೆದಿದ್ದಾರೆ ಎಂದು ಹೇಳಿದರು.
ನವದೆಹಲಿಯಲ್ಲಿರುವ ಅಡ್ವಾಣಿ ಅವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 'ಅಡ್ವಾಣಿ ಅವರು ಪಕ್ಷದ ಹಿರಿಯ ಮುಖಂಡರಾಗಿದ್ದು, ಅವರು ಬಿಜೆಪಿಯಿಂದ ದೂರವಾಗುವುದಿಲ್ಲ. ಅಡ್ವಾಣಿ ಅವರ ರಾಜಿನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಅವರೊಂದಿಗೆ ಚರ್ಚಿಸಿದ್ದೇವೆ. ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಅವರು ಕೂಡ ಮಾತನಾಡಿದ್ದಾರೆ. ಇದೀಗ ಅವರು ತಮ್ಮ ನಿರ್ಧಾರವನ್ನು ಹಿಂಪಡೆಯಲು ಒಪ್ಪಿಗೆ ನೀಡಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದರು.
ರಾಜಿನಾಮೆ ನಿರ್ಧಾರ ಹಿಂಪಡೆಯುವುದಕ್ಕೆ ಅಡ್ವಾಣಿಯವರು ಶರತ್ತು ವಿಧಿಸಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅಡ್ವಾಣಿ ಅವರು ತಮಗೆ ಯಾವುದೇ ರೀತಿಯ ಶರತ್ತು ವಿಧಿಸಿಲ್ಲ. ಪಕ್ಷಕ್ಕೆ ಅಡ್ವಾಣಿ ಅವರ ಮಾರ್ಗದರ್ಶನ ಅವಶ್ಯಕವಾಗಿದ್ದು, ಇದನ್ನು ಅವರಿಗೆ ನಾವು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಅವರು ಹೇಳಿದರು. ಅಲ್ಲದೆ ಪಕ್ಷ ಕೈಗೊಳ್ಳುವ ಯಾವುದೇ ನಿರ್ಧಾರಗಳಲ್ಲಿ ಅಡ್ವಾಣಿ ಅವರ ಸಲಹೆಗಳನ್ನು ಪಡೆಯುವುದಾಗಿಯೂ ಮತ್ತು ಪಕ್ಷದ ನಿರ್ಧಾರಕ್ಕೆ ಅಡ್ವಾಣಿ ಅವರು ಬದ್ಧರಾಗಿರುತ್ತಾರೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಸುದ್ದಿಗೋಷ್ಠಿಗೆ ಅಡ್ವಾಣಿ ಗೈರು
ಆದರೆ ರಾಜನಾಥ್ ಸಿಂಗ್ ಅವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಅಡ್ವಾಣಿ ಅವರು ಗೈರು ಹಾಜರಾಗಿದ್ದರು. ಈ ಬಗ್ಗೆ ರಾಜನಾಥ್ ಸಿಂಗ್ ಅವರನ್ನು ಕೇಳಿದಾಗ, ಅಡ್ವಾಣಿ ಅವರನ್ನು ನಾನೇ ಸುದ್ದಿಗೋಷ್ಠಿಗೆ ಬರಬೇಡಿ ಎಂದು ಕೇಳಿದ್ದೆ. ಹೀಗಾಗಿ ಅವರು ಸುದ್ದಿಗೋಷ್ಠಿಗೆ ಆಗಮಿಸಲಿಲ್ಲ ಎಂದು ಹೇಳುತ್ತಲೇ ಅಲ್ಲಿಂದ ನಿರ್ಗಮಿಸಿದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ ನಂತರ ಬೇಸರಗೊಂಡಿದ್ದ ಅಡ್ವಾಣಿ ಅವರು ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಇದೇ ಕಾರಣಕ್ಕಾಗಿಯೇ ಗೋವಾದಲ್ಲಿ ಮೂರುದಿನಗಳ ಕಾಲ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಗೂ ಅಡ್ವಾಣಿ ಗೈರು ಹಾಜರಾಗಿದ್ದರು.