ಸೂರ್ಯನೆಲ್ಲಿ: ಸಾಕ್ಷಿಯನ್ನಾಗಿಸಲು ಯುವತಿ ಅರ್ಜಿ
ಕೊಚ್ಚಿ: ಸೂರ್ಯನೆಲ್ಲಿ ಅತ್ಯಾಚಾರ ಪ್ರಕರಣದ ಯುವತಿಯು ಕುರಿಯನ್ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ತನ್ನನ್ನು ಸಾಕ್ಷಿಯನ್ನಾಗಿ ಪರಿಗಣಿಸಬೇಕು ಎಂದು ಕೇರಳ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ತಾವು ಪ್ರಮುಖ ಸಾಕ್ಷಿಯಾಗಿದ್ದು, ವಿಚಾರಣೆಯಲ್ಲಿ ತಮ್ಮ ಪಾತ್ರ ಅತ್ಯಗತ್ಯವಾಗಿದೆ ಎಂದು ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಅಫಿವಿಟ್ ಸಲ್ಲಿಸಿದ್ದ ಕೇರಳ ಸರ್ಕಾರ, ಅತ್ಯಾಚಾರ ಪ್ರಕರಣ ದಾಖಲಿಸಿರುವ ಮಹಿಳಾ ಸಂಘಂ ಸಂಸ್ಥೆಯ ದೂರು ದುರುದ್ದೇಶಪೂರ್ವಕವಾಗಿದ್ದು, ಪ್ರಕರಣವನ್ನು ಕೈ ಬಿಡಬೇಕು ಎಂದು ನ್ಯಾಯಾಲಯದಲ್ಲಿ ಮನವಿ ಮಾಡಿತ್ತು. ಸರ್ಕಾರದ ಈ ನಿಲುವನ್ನು ಮಹಿಳಾ ಸಂಘಟನೆಗಳು ಮತ್ತು ಅತ್ಯಾಚಾರಕ್ಕೊಳಗಾಗಿದ್ದೇನೆ ಎನ್ನುತ್ತಿರುವ ಮಹಿಳೆ ತೀವ್ರವಾಗಿ ಖಂಡಿಸಿದ್ದರು. ಅಲ್ಲದೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕುರಿಯನ್ ಅವರನ್ನು ರಕ್ಷಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.
ಇದೀಗ ಸ್ವತಃ ಮಹಿಳೆಯೇ ತನ್ನನ್ನು ಸಾಕ್ಷಿಯನ್ನಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿರುವುದು ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ.