ಕಲ್ಲಿದ್ದಲು ಹಗರಣ: ಗುಪ್ತಾ ವಿಚಾರಣೆಗೆ ಅನುಮತಿ
ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಹೆಚ್.ಸಿ.ಗುಪ್ತಾ ಅವರನ್ನು ವಿಚಾರಣೆಗೊಳಪಡಿಸಲು ಕೇಂದ್ರ ಸರ್ಕಾರ ಸಿಬಿಐ ಅಧಿಕಾರಿಗಳಿಗೆ ಅನುಮತಿ ನೀಡಿದೆ.
ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ಮಾಜಿ ಕಾರ್ಯದರ್ಶಿ ಗುಪ್ತಾ ಅವರ ಪಾತ್ರದ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಸಿಬಿಐ ಅಧಿಕಾರಿಗಳು, ಅವರನ್ನು ವಿಚಾರಣೆಗೊಳಪಡಿಸಲು ಸರ್ಕಾರದ ಅನುಮತಿ ಕೇಳಿದ್ದರು. ಆದರೆ ಸಿಬಿಐ ಅಧಿಕಾರಿಗಳ ಮನವಿಯನ್ನು ತಿರಸ್ಕರಿಸಿದ್ದ ಕೇಂದ್ರ ಸರ್ಕಾರ, ಪ್ರಕರಣದಲ್ಲಿ ಅವರ ಪಾತ್ರ ಮತ್ತು ವಿಚಾರಣೆಯ ಕಾರಣ ಕೇಳಿತ್ತು. ಇದೀಗ ಸರ್ಕಾರಕ್ಕೆ ಮಾಹಿತಿ ನೀಡಿರುವ ಸಿಬಿಐ ಅಧಿಕಾರಿಗಳು ಅವರನ್ನು ವಿಚಾರಣೆ ನಡೆಸಲು ಅನುಮತಿ ಪಡೆದುಕೊಂಡಿದ್ದಾರೆ.
ಹೆಚ್.ಸಿ.ಗುಪ್ತಾ ಅವರು 2006 ರಿಂದ 2009ರ ಅವಧಿಯಲ್ಲಿ ನಡೆದಿದ್ದ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ವೇಳೆ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಇದೇ ವೇಳೆಯಲ್ಲಿಯೇ ಜಿಂದಾಲ್ ಸಂಸ್ಥೆಗೆ ಸರ್ಕಾರ ಕಲ್ಲಿದ್ದಲು ನಿಕ್ಷೇಪವನ್ನು ಗುತ್ತಿಗೆ ನೀಡಿತ್ತು. ನಿನ್ನೆ ಜಿಂದಾಲ್ ಸಂಸ್ಥೆಯ ಮಾಲೀಕ ನವೀನ್ ಜಿಂದಾಲ್ ಮತ್ತು ಕಲ್ಲಿದ್ದಲು ಖಾತೆ ರಾಜ್ಯ ಸಚಿವರಾಗಿದ್ದ ದಾಸರಿ ನಾರಾಯಣ ರಾವ್ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ 12ನೇ ಚಾರ್ಜ್ಶೀಟ್ ಸಲ್ಲಿಸಿದ್ದು, ನವೀನ್ ಜಿಂದಾಲ್ ಮತ್ತು ದಾಸರಿ ನಾರಾಯಣ ರಾವ್ ಅವರಿಗೆ ಸೇರಿದ ಮನೆ ಮತ್ತು ಕಚೇರಿಗಳು ಸೇರಿದಂತೆ 15 ವಿವಿಧ ಪ್ರದೇಶಗಳ ಮೇಲೆ ದಾಳಿ ಮಾಡಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.