'ಜಿಯಾ' ಆತ್ಮಹತ್ಯೆ: ಸೂರಜ್ಗೆ ಬುದ್ದಿ ಹೇಳಿದ್ದ 'ಸಲ್ಲು'?
ಆತ್ಮಹತ್ಯೆ ಮಾಡಿಕೊಂಡ ನಟಿ ಜಿಯಾಖಾನ್ ಪ್ರಿಯಕರ ಸೂರಜ್ ಗೆ ನಟ ಸಲ್ಮಾನ್ ಖಾನ್ ಬುದ್ದಿವಾದ ಹೇಳಿದ್ದ ಅಂಶ ಬೆಳಕಿಗೆ ಬಂದಿದೆ.
ಮುಂಬೈ: ಬಾಲಿವುಡ್ ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಜಿಯಾ ಮತ್ತು ಸೂರಜ್ ಸಂಬಂಧದ ಕುರಿತು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಪ್ರಿಯಕರ ಸೂರಜ್ ಪಾಂಚೋಲಿಗೆ ಬುದ್ದಿವಾದ ಹೇಳಿದ್ದ ಅಂಶ ಬೆಳಕಿಗೆ ಬಂದಿದೆ.
ಈ ವಿಷಯವನ್ನು ಸ್ವತಃ ಜಿಯಾ ತಾಯಿ ರಬ್ಯಾನ್ ಖಾನ್ ಅವರು ತಿಳಿಸಿದ್ದು, ನಟಿ ಜಿಯಾ ಖಾನ್ ಮತ್ತು ಸೂರಜ್ ಪಾಂಚೋಲಿ ಅವರ ಪ್ರೇಮ ಪ್ರಕರಣ ಸುಮಾರು ಒಂದು ವರ್ಷದಿಂದ ಸಾಗುತ್ತಿತ್ತು. ಸೂರಜ್ ಜಿಯಾಳನ್ನು ತೀರ ಹೀನವಾಗಿ ಕಾಣುತ್ತಿದ್ದ ಮತ್ತು ಮಧ್ಯಪಾನ ಮಾಡಿ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದನು ಎಂಬ ಅಂಶವನ್ನು ರಬ್ಯಾನ್ ಖಾನ್ ಹೊರಹಾಕಿದ್ದಾರೆ. ಸೂರಜ್ನ ಆಟಾಟೋಪ ನೋಡಿದ ಜಿಯಾ ಪೋಷಕರು ಜಿಯಾಖಾನ್ ಮತ್ತು ಸೂರಜ್ ಸಂಬಂಧವನ್ನು ಕೊನೆಗಾಣಿಸಲು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮೊರೆಹೋಗಿದ್ದ ಅಂಶವನ್ನು ಕೂಡ ರಬ್ಯಾನ್ ಖಾನ್ ತಿಳಿಸಿದ್ದಾರೆ.
ನಟ ಸಲ್ಮಾನ್ ಖಾನ್ ಜಿಯಾಖಾನ್ ಕುಟುಂಬಕ್ಕೆ ತುಂಬಾ ಪರಿಚಯವಿದ್ದ ಕಾರಣ ಜಿಯಾ ತಂದೆ ಸಲ್ಮಾನ್ ಖಾನ್ರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಸ್ವತಃ ಸಲ್ಮಾನ್ ಖಾನ್ ಅವರು ಸೂರಜ್ನೊಂದಿಗೆ ಮಾತನಾಡಿ ಜಿಯಾಳನ್ನು ಅವಳ ಪಾಡಿಗೆ ಬಿಡುವಂತೆ ಬುದ್ಧಿವಾದ ಹೇಳಿದ್ದಾರೆ. ಇದಾದ ಕೆಲದಿನಗಳವರೆಗೆ ಸುಮ್ಮನಾಗಿದ್ದ ಸೂರಜ್, ಮತ್ತೆ ಜಿಯಾಖಾನ್ಳ ಸಂಪರ್ಕ ಬೆಳೆಸಿದ್ದಾನೆ.
ಜಿಯಾಳ ಜನ್ಮದಿನವನ್ನೇ ಕಾರಣವನ್ನಾಗಿಟ್ಟುಕೊಂಡ ಸೂರಜ್ ಆಕೆಯನ್ನು ಗೋವಾಗೆ ಕರೆದೊಯ್ದು ಮನಬಂದಂತೆ ಥಳಿಸಿದ್ದನು. ಇದನ್ನು ತನಗೆ ಸ್ವತಃ ಜಿಯಾ ಹೇಳಿದ್ದು, ಕುಡಿದ ಮತ್ತಿನಲ್ಲಿ ಸೂರಜ್ ತುಂಬಾ ಕ್ರೂರನಾಗುತ್ತಿದ್ದ. ಅಲ್ಲದೆ ಇದಾದ ಬಳಿಕ ಆತ ಜಿಯಾಗೆ ಹೂವಿನ ಗುಚ್ಛ ನೀಡಿ ತಮ್ಮ ನಡುವಿನ ಪ್ರೇಮವನ್ನು ಇಲ್ಲಿಗೆ ಕೊನೆಗಾಣಿಸುವ ಕುರಿತು ಪತ್ರ ಬರೆದಿದ್ದ ಎಂದು ರಬ್ಯಾನ್ ಹೇಳಿದ್ದಾರೆ. ಅಲ್ಲದೆ ಗೋವಾ ಪ್ರವಾಸದ ನಂತರ ಜಿಯಾ ತೀರಾ ಕುಗ್ಗಿ ಹೋಗಿದ್ದಳು ಅವರು ತಿಳಿಸಿದ್ದಾರೆ.
ಇದೀಗ ಸೂರಜ್ ಪಾಂಚೋಲಿಯನ್ನು ಬಂಧಿಸಿರುವ ಮುಂಬೈ ಪೊಲೀಸರು, ಆತನ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರೇರೇಪಣೆ ನೀಡುವುದು)ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ನ್ಯಾಯಾಲಯ ಸೂರಜ್ನನ್ನು ಜೂನ್ 13ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.