ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ತೆಲಂಗಾಣ ಹೋರಾಟ: ಹೈದರಾಬಾದ್ ಪ್ರಕ್ಷುಬ್ಧ

'ಅಸೆಂಬ್ಲಿ ಚಲೋ' ಚಳುವಳಿ ವಿಕೋಪಕ್ಕೆ ತಿರುಗಿದ್ದು, ನಗರದಾದ್ಯಂತ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

Srinivasa Murthy VN
Updated On : 14 Jun 2013, 6:22 am

ಹೈದರಾಬಾದ್: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗಾಗಿ ತೆಲಂಗಾಣ ಜಂಟಿ ಕಾರ್ಯ ಸಮಿತಿ ಕರೆ ನೀಡಿದ್ದ 'ಅಸೆಂಬ್ಲಿ ಚಲೋ' ಚಳುವಳಿ ವಿಕೋಪಕ್ಕೆ ತಿರುಗಿದ್ದು, ಹೈದರಾಬಾದ್ ನಗರದಾದ್ಯಂತ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ತೆಲಂಗಾಣ ಜಂಟಿ ಕಾರ್ಯಕಾರಿ ಸಮಿತಿಯ ನೇತೃತ್ವದಲ್ಲಿ 'ಅಸೆಂಬ್ಲಿ ಚಲೋ' ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಪೊಲೀಸರ ಅನುಮತಿ ನಿರಾಕರಣೆಯ ನಡುವೆಯೇ ರ್ಯಾಲಿ ಹಮ್ಮಿಕೊಂಡಿದ್ದರಿಂದ ರ್ಯಾಲಿಯನ್ನು ಪೊಲೀಸರು ತಡೆದಿದ್ದಾರೆ. ಪೊಲೀಸರ ನಡವಳಿಕೆಯನ್ನು ಖಂಡಿಸಿರುವ ಪ್ರತಿಭಟನಾಕಾರರು, ಬ್ಯಾರಿಕೇಡ್‌ಗಳನ್ನು ಮುರಿದು ಆಂಧ್ರ ಪ್ರದೇಶ ಅಸೆಂಬ್ಲಿಯನ್ನು ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಹೈದರಾಬಾದ್ ನಗರದ ವಿವಿಧ ಪ್ರದೇಶಗಳಲ್ಲಿ ಏಕಕಾಲದಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು, ಪೊಲೀಸ್ ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಅಲ್ಲದೆ ಪ್ರತಿಭಟನಾನಿರತರನ್ನು ತಡೆಯುತ್ತಿರುವ ಪೊಲೀಸರ ಮೇಲೆಯೇ ಪ್ರತಿಭಟನಾನಿರತರು ಕಲ್ಲು ತೂರಾಟ ಮಾಡುತ್ತಿದ್ದು, ಪ್ರತಿಭಟನಾಕಾರರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗ ಮಾಡುವ ಮೂಲಕ ಅವರನ್ನು ಚದುರಿಸಲು ಪ್ರಯತ್ನಿಸುತ್ತಿದ್ದಾರೆ.

ಈ ನಡುವೆ ಟಿಆರ್‌ಎಸ್ ಪಾಲಿಟ್ ಬ್ಯೂರೋ ಸದಸ್ಯ ಶ್ರವಣ್ ಅವರು ಪೊಲೀಸರ ಲಾಠಿ ಪ್ರಹಾರದಿಂದಾಗಿ ಪ್ರಜ್ಞೆ ತಪ್ಪಿದ್ದು, ಅವರನ್ನು ಕೂಡಲೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರತಿಭಟನಾಕಾರರ ಮಿತಿಮೀರಿದ ನಡವಳಿಕೆಯಿಂದಾಗಿ ಹೈದರಾಬಾದ್ ನಗರದಾದ್ಯಂತ ಪೊಲೀಸರು ನಿಷೇಧಾಜ್ಞೆ ಹೊರಡಿಸಿದ್ದು, ನಾಳೆ ಕೂಡ ನಿಷೇಧಾಜ್ಞೆ ಮುಂದುವರೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತೆಲಂಗಾಣ ಜಂಟಿ ಕಾರ್ಯ ಸಮಿತಿ ಮತ್ತು ಉಸ್ಮಾನಿಯಾ ವಿವಿ ವಿದ್ಯಾರ್ಥಿ ನಾಯಕರುಗಳನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಕ್ರಮವನ್ನು ಖಂಡಿಸಿರುವ ತೆಲಂಗಾಣ ರಾಷ್ಟ್ರ ಸಮಿತಿ ಮುಖಂಡ ಕೆ. ಚಂದ್ರಶೇಖರರಾವ್ ಅವರು, ನಾಳೆ ತೆಲಂಗಾಣ ಬಂದ್‌ಗೆ ಕರೆ ನೀಡಿದ್ದಾರೆ.

ಒಟ್ಟಾರೆ ತೆಲಂಗಾಣ ವಿವಾದದಿಂದಾಗಿ ಇಂದು ಹೈದರಾಬಾದ್ ನಗರದಲ್ಲಿ ಅಕ್ಷರಶಃ ಬಂದ್ ವಾತಾವರಣ ನಿರ್ಮಾಣವಾಗಿದ್ದು, ಪ್ರಮುಖ ಮಾರುಕಟ್ಟೆಗಳು, ಮಾಲ್‌ಗಳು ಮತ್ತು ಎಪಿಎಂಸಿಗಳು ಸ್ವಯಂ ಘೋಷಿತ ಬಂದ್ ಮಾಡುತ್ತಿವೆ. ಕಳೆದ ಬುಧವಾರವಷ್ಟೇ ಉಸ್ಮಾನಿಯಾ ವಿವಿ ವಿದ್ಯಾರ್ಥಿಗಳು 'ಅಸೆಂಬ್ಲಿ ಚಲೋ' ಚಳುವಳಿ ನಡೆಸಲು ಅನುಮತಿ ನೀಡುವಂತೆ ಕೋರಿದ್ದರು. ಆದರೆ ಅಂದು ಪೊಲೀಸರು ಅನುಮತಿ ನೀಡಿರಲಿಲ್ಲ. ಇದರಿಂದಾಗಿ ಕುಪಿತಗೊಂಡಿದ್ದ ಉಸ್ಮಾನಿ ವಿವಿ ವಿದ್ಯಾರ್ಥಿಗಳು ಅಂದು ಕೂಡ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement