ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜಾಹಿರಾತು ವಿವಾದ: ಕ್ರಿಕೆಟಿಗರ ವಿರುದ್ಧ ದೂರು

ಭಾರತೀಯ ಕ್ರಿಕೆಟಿಗರು ಪಾಲ್ಗೊಂಡಿದ್ದ ಖಾಸಗಿ ಜಾಹಿರಾತೊಂದು ವಿವಾದಕ್ಕೆ ಕಾರಣವಾಗಿದ್ದು, ಕ್ರಿಕೆಟಿಗರ ವಿರುದ್ಧ ದೂರು ದಾಖಲಿಸಲಾಗಿದೆ.

Srinivasa Murthy VN
Updated On : 15 Jun 2013, 3:44 am

ನವದೆಹಲಿ: ಭಾರತೀಯ ಕ್ರಿಕೆಟಿಗರು ಪಾಲ್ಗೊಂಡಿದ್ದ ಖಾಸಗಿ ಜಾಹಿರಾತೊಂದು ವಿವಾದಕ್ಕೆ ಕಾರಣವಾಗಿದ್ದು, ಕ್ರಿಕೆಟಿಗರ ವಿರುದ್ಧ ದೂರು ದಾಖಲಿಸಲಾಗಿದೆ.

ಭಾರತೀಯ ಕ್ರಿಕೆಟ್ ತಂಡ ಆಟಗಾರರಾದ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ, ಗೌತಮ್ ಗಂಭೀರ್, ವಿರೇಂದ್ರ ಸೆಹ್ವಾಗ್, ಸುರೇಶ್ ರೈನಾ, ಜಹೀರ್ ಖಾನ್ ಸೇರಿದಂತೆ ಬಾಲಿವುಡ್ ನಟರಾದ ಹೃತಿಕ್ ರೋಷನ್ ಮತ್ತು ಪ್ರಿಯಾಂಕಾ ಛೋಪ್ರಾ ಅವರು ಅಭಿನಯಿಸಿದ್ದ ಖಾಸಗಿ ಜಾಹಿರಾತು ಮತ್ತು ಸಂಸ್ಥೆಯ ವಿರುದ್ಧ ಉತ್ತರಾಖಂಡ್ ಆಹಾರ ಸುರಕ್ಷತಾ ಇಲಾಖೆಯು ನ್ಯಾಯಾಲಯದ ಮೆಟ್ಟಿಲೇರಿದೆ.

ಕ್ರಿಕೆಟಿಗರು ಮತ್ತು ಉತ್ಪನ್ನ ಸಂಸ್ಥೆಯು ತಮ್ಮ ಜಾಹಿರಾತಿನಲ್ಲಿ ಗ್ರಾಹಕರನ್ನು ತಪ್ಪು ದಾರಿಗೆ ಎಳೆಯಲು ಯತ್ನಿಸಿದ್ದಾರೆ ಎಂದು ಇಲಾಖೆ ಹೇಳಿದೆ. ಜಾಹಿರಾತಿನಲ್ಲಿ ಈ ಎಲ್ಲಾ ಆಟಗಾರರು ಮತ್ತು ನಟರು ಸಹಾರಾ ಸಂಸ್ಥೆಯ ಒಡೆತನದ ಕ್ಯೂ-ಷಾಪ್‌ನಲ್ಲಿ ದೊರೆಯುವ ಎಲ್ಲ ಆಹಾರ ಧಾನ್ಯಗಳು ಮತ್ತು ಆಹಾರೋತ್ಪನ್ನಗಳು ಪರೀಕ್ಷೆಗೊಳಪಟ್ಟಿದ್ದು, ಶೇ.100ರಷ್ಟು ಪರಿಶುದ್ಧವಾದುವುಗಳೆಂದು ಹೇಳುವ ಮೂಲಕ ಗ್ರಾಹಕರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಇಲಾಖೆ ಆರೋಪಿಸಿದೆ.

ಅಲ್ಲದೆ ಸಹಾರಾ ಸಂಸ್ಥೆಯ ಕ್ಯೂ-ಷಾಪ್‌ನಲ್ಲಿ ದೊರೆಯುವ ಆಹಾರೋತ್ಪನ್ನಗಳನ್ನು ಇಲಾಖೆ ಪರೀಕ್ಷಿಸಿದ್ದು, ಆ ವಸ್ತುಗಳು ಕೂಡ ಸಾಮಾನ್ಯ ಮಾಲ್‌ಗಳು ಮತ್ತು ಅಂಗಡಿಗಳಲ್ಲಿ ದೊರೆಯುವಂತೆ ಕಲಬೆರಕೆ ಅಥವಾ ಕಲುಷಿತ ವಸ್ತುಗಳಾಗಿವೆ ಎಂದು ಆರೋಪಿಸಿದೆ. ಹೀಗಾಗಿ ಈ ಎಲ್ಲ ಆಟಗಾರರು, ಬಾಲಿವುಡ್ ನಟರು ಮತ್ತು ಸಹರಾ ಸಂಸ್ಥೆಯ ಮಾಲೀಕ ಸುಭ್ರತೋ ರಾಯ್ ಅವರನ್ನು ವಿಚಾರಣೆ ನಡೆಸಬೇಕು ಎಂದು ಇಲಾಖೆ ದೂರಿನಲ್ಲಿ ಮನವಿ ಮಾಡಿಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement