ಪೆಟ್ರೋಲ್ ದರ 2 ರು. ಏರಿಕೆ
ಪೆಟ್ರೋಲ್ ದರದಲ್ಲಿ ಮತ್ತೆ 2 ರುಪಾಯಿ ಏರಿಕೆಯಾಗಿದ್ದು, ನೂತನ ದರ ಇಂದು ಮಧ್ಯ ರಾತ್ರಿಯಿಂದಲೇ ಜಾರಿಯಾಗಲಿದೆ.
ನವದೆಹಲಿ: ಪೆಟ್ರೋಲ್ ದರದಲ್ಲಿ ಮತ್ತೆ 2 ರುಪಾಯಿ ಏರಿಕೆಯಾಗಿದ್ದು, ನೂತನ ದರ ಇಂದು ಮಧ್ಯ ರಾತ್ರಿಯಿಂದಲೇ ಜಾರಿಯಾಗಲಿದೆ.
ಪೆಟ್ರೋಲ್ ದರದಲ್ಲಿ 2 ರುಪಾಯಿ ಏರಿಕೆ ಮಾಡಿ ತೈಲ ಸಚಿವಾಲಯ ಆದೇಶ ಹೊರಡಿಸಿದೆ. ತೈಲ ಕಂಪನಿಗಳ ಬೇಡಿಕೆ ಹಿನ್ನಲೆಯಲ್ಲಿ ಪೆಟ್ರೋಲ್ ದರ ಏರಿಕೆಗೆ ಸಚಿವಾಲಯ ಒಪ್ಪಿಗೆ ನೀಡಿದೆ.
ನವದೆಹಲಿಯಲ್ಲಿ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೈಲ ಸಂಸ್ಥೆಗಳು ಪಾಲ್ಗೊಂಡು ಪೆಟ್ರೋಲ್ ದರ ಏರಿಕೆ ಕುರಿತು ಚರ್ಚೆ ನಡೆಸಿದವು. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರ ಪದೇ ಪದೇ ಏರಿಕೆಯಾಗುತ್ತಿದ್ದು, ಭಾರತದಲ್ಲಿ ಪೆಟ್ರೋಲ್ ದರ ಏರಿಕೆಗೆ ತೈಲ ಸಂಸ್ಥೆಗಳು ಸಚಿವಾಲಯವನ್ನು ಒತ್ತಾಯಿಸಿದ್ದವು. ಪೆಟ್ರೋಲ್ ದರ ಏರಿಕೆಯಾಗದಿದ್ದರೆ ಪ್ರತಿನಿತ್ಯ ತೈಲ ಸಂಸ್ಧೆಗಳಿಗೆ ಸಾವಿರಾರು ಕೋಟಿ ನಷ್ಟವಾಗುವ ಹಿನ್ನಲೆಯಲ್ಲಿ ದರ ಏರಿಕೆ ಪ್ರಸ್ತಾಪಕ್ಕೆ ಸಚಿವಾಲಯ ಒಪ್ಪಿಗೆ ನೀಡಿದೆ.
ಅಂತಾರಾಷ್ಟ್ರೀಯ ಷೇರುಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಕುಸಿದಿರುವುದು ಕೂಡ ಪೆಟ್ರೋಲ್ ದರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಕಳೆದ ಮೇ 31ರಂದು ಪೆಟ್ರೋಲ್ ದರದಲ್ಲಿ 70 ಪೈಸೆ ಏರಿಕೆಯಾಗಿತ್ತು. ಇದೀಗ ಮತ್ತೆ ಪೆಟ್ರೋಲ್ ದರ ಏರಿಕೆಯಾಗಿದ್ದು, ಗ್ರಾಹಕರ ಮೇಲೆ ಒತ್ತಡ ಬೀಳಲಿದೆ.