ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿ ಪಕ್ಷಪಾತಿ ಮತ್ತು ಸೊಕ್ಕಿನ ಮನುಷ್ಯ: ಜೆಡಿ(ಯು)

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಜೆಡಿ(ಯು) ಹರಿಹಾಯ್ದಿದ್ದು, ಮೋದಿ ಓರ್ವ ಪಕ್ಷಪಾತಿ ಮತ್ತು ಸೊಕ್ಕಿನ ಮನುಷ್ಯ ಎಂದು ಛೇಡಿಸಿದೆ.

Srinivasa Murthy VN
Updated On : 15 Jun 2013, 3:43 am

ಪಾಟ್ನಾ: ಎನ್‌ಡಿಎ ಮೈತ್ರಿ ಕೂಟದಿಂದ ಹೊರಬರಲು ನಿರ್ಧರಿಸಿರುವ ಜೆಡಿ(ಯು) ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದು, ಮೋದಿ ಓರ್ವ ಪಕ್ಷಪಾತಿ ಮತ್ತು ಸೊಕ್ಕಿನ ಮನುಷ್ಯ ಎಂದು ಛೇಡಿಸಿದೆ.

ಪಾಟ್ನಾದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಜೆಡಿ(ಯು) ಹಿರಿಯ ಮುಖಂಡ ಶಿವಾನಂದ ತಿವಾರಿ ಅವರು, ನಮ್ಮ ಮತ್ತು ಬಿಜೆಪಿ ಮೈತ್ರಿ ಕೊನೆಗೊಂಡಿದ್ದು, ಕೇವಲ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ ಎಂದು ಹೇಳಿದರು. ಅಲ್ಲದೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪಕ್ಷಪಾತಿ ಧೋರಣೆ ಹೊಂದಿದ್ದು, ಅವರು ಸೊಕ್ಕಿನ ಮನುಷ್ಯರಾಗಿದ್ದಾರೆ ಎಂದು ಟೀಕಿಸಿದ್ದಾರೆ.

'ಬಿಜೆಪಿ ಬಗ್ಗೆ ನಾವು ಇಷ್ಟು ದಿನ ಸಕಾರಾತ್ಮಕವಾಗಿಯೇ ಇದ್ದೆವು. ಆದರೆ ಬಿಜೆಪಿಯ ಇತ್ತೀಚಿನ ಬೆಳವಣಿಗೆಗಳು ಮತ್ತು ಪಕ್ಷದ ಹಿರಿಯ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿ ಸಮಾಧಾನಕರವಾಗಿಲ್ಲ. ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಮಾಡುವುದಿಲ್ಲ ಎಂದು ಬಿಜೆಪಿ ಹೇಳುತ್ತದೆ ಎಂಬ ಭಾವನೆಯಿಂದ ಕಾಯುತ್ತಿದ್ದೆವು. ಆದರೆ ಬಿಜೆಪಿ ತನ್ನ ಅಂಗ ಪಕ್ಷಗಳ ಅಭಿಪ್ರಾಯಕ್ಕೆ ಬೆಲೆ ನೀಡುತ್ತಿಲ್ಲ, ಹೀಗಾಗಿ ನಾವು ಅನಿವಾರ್ಯವಾಗಿ ಎನ್‌ಡಿಎಯಿಂದ ಹೊರನಡೆಯುತ್ತಿದ್ದೇವೆ' ಎಂದು ಶಿವಾನಂದ ತಿವಾರಿ ಹೇಳಿದರು.

ಮೋದಿ ಮತ್ತು ನಿತೀಶ್ ಕುಮಾರ್ ನಡುವಿನ ಭಿನ್ನಾಭಿಪ್ರಾಯವೇ ಎನ್‌ಡಿಎ ತೊರೆಯಲು ಕಾರಣವೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಾನಂದ ತಿವಾರಿ ಅವರು, ನರೇಂದ್ರ ಮೋದಿ ಅವರ ಕುರಿತು ನಮ್ಮ ಪಕ್ಷ ಮೊದಲಿನಿಂದಲೂ ಒಂದೇ ಧೋರಣೆಯನ್ನು ಅನುಸರಿಸಿಕೊಂಡು ಬಂದಿದೆ. ಪ್ರಸ್ತುತ ನಿರ್ಧಾರ ವೈಯುಕ್ತಿಕವಾದುದಲ್ಲ. ಅದು ಪಕ್ಷದ ನಿರ್ಧಾರ ಎಂದು ಹೇಳಿದರು.

ಈ ನಡುವೆ ಎನ್‌ಡಿಎ ಮೈತ್ರಿಕೂಟದಿಂದ ಜೆಡಿ(ಯು) ಹೊರಬರುವುದು ಖಚಿತವಾಗುತ್ತಿದ್ದಂತೆಯೇ ಇತ್ತ ಬಿಹಾರದ ಬಿಜೆಪಿ ಶಾಸಕರು ಮತ್ತು ಸಚಿವರುಗಳು ನಿತೀಶ್ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಅಲ್ಲದೆ ಜೆಡಿ(ಯು) ನಿರ್ಧಾರ ಹೊರಬೀಳುತ್ತಿದ್ದಂತಯೇ ನಿತೀಶ್ ಸರ್ಕಾರಕ್ಕೆ ನೀಡಿರುವ ತಮ್ಮ ಬೆಂಬಲವನ್ನು ವಾಪಸ್ ಪಡೆಯಲು ರಾಜ್ಯ ಬಿಜೆಪಿ ಘಟಕ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement