ಅಧಿಕೃತವಾಗಿ ಮೈತ್ರಿಯಿಂದ ಹೊರಕ್ಕೆ
ಬಿಜೆಪಿ ಮತ್ತು ಜೆಡಿ(ಯು) ಮೈತ್ರಿ ಭಾನುವಾರ ಅಧಿಕೃತವಾಗಿ ಕೊನೆಗೊಂಡಿದ್ದು, ಸತತ 17 ವರ್ಷಗಳ ದೋಸ್ತಿ ಇದೀಗ ಅಂತ್ಯಗೊಂಡಿದೆ.
ಪಾಟ್ನಾ: ಹಲವು ದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ಬಿಜೆಪಿ ಮತ್ತು ಜೆಡಿ(ಯು) ಮೈತ್ರಿ ಭಾನುವಾರ ಅಧಿಕೃತವಾಗಿ ಕೊನೆಗೊಂಡಿದ್ದು, ಸತತ 17 ವರ್ಷಗಳ ದೋಸ್ತಿ ಅಂತ್ಯಗೊಂಡಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗಿನ ಮುಸುಕಿನ ಗುದ್ದಾಟಕ್ಕೆ ಇಂದು ಅಧಿಕೃತ ತೆರೆಎಳೆದಿದ್ದು, ಎನ್ಡಿಎ ಮೈತ್ರಿಕೂಟದಿಂದ ತಮ್ಮ ಜೆಡಿ(ಯು) ಪಕ್ಷ ಹೊರಬಂದಿದೆ ಎಂದು ಮಾಧ್ಯಮಗಳಿಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇಂದು ಈ ಬಗ್ಗೆ ಬಿಹಾರ ರಾಜ್ಯಪಾಲ ಡಿ.ವೈ. ಪಾಟೀಲ್ ಅವರನ್ನು ಭೇಟಿ ಮಾಡಿದ್ದ ನಿತೀಶ್ ಕುಮಾರ್ ಅವರು ತಂಡ ಎನ್ಡಿಎ ಮೈತ್ರಿಕೂಟದಿಂದ ತಾವು ಹೊರಬರುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರನ್ನು ಎನ್ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುತ್ತಿರುವುದನ್ನು ವಿರೋಧಿಸಿದ್ದ ಜೆಡಿ(ಯು) ಅಂದೇ ಮೈತ್ರಿಕೂಟದಿಂದ ಹೊರಬರುವ ಕುರಿತು ಮಾಹಿತಿ ನೀಡಿತ್ತು. ಆದರೆ ಬಿಜೆಪಿ ಪಕ್ಷದ ಅಧಿಕೃತ ಘೋಷಣೆಯಾಗುವವರೆಗೂ ಕಾದುನೋಡುತ್ತೇವೆ ಎಂದು ಜೆಡಿ(ಯು) ಅಧ್ಯಕ್ಷ ಶರದ್ ಯಾದವ್ ಅವರು ಹೇಳಿದ್ದರು. ಅದರಂತೆ ಕಳೆದ ವಾರ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಬಿಜೆಪಿ ಪಕ್ಷದ ನಾಯಕರು ಜೆಡಿ(ಯು) ವಿರುದ್ಧ ಸೆಡ್ಡು ಹೊಡೆದಿದ್ದರು. ಇದೀಗ ಅಧಿಕೃತವಾಗಿ ಜೆಡಿ(ಯು) ಎನ್ಡಿಎ ಮೈತ್ರಿಕೂಟದಿಂದ ಹೊರಬಂದಿದೆ.
ಎನ್ಡಿಎ ಸಂಚಾಲಕ ಹುದ್ದೆಗೆ ಶರದ್ ಯಾದವ್ ರಾಜಿನಾಮೆ
ಎನ್ಡಿಎ ಮೈತ್ರಿಕೂಟದಿಂದ ಜೆಡಿಯು ಹೊರಬಂದ ಹಿನ್ನಲೆಯಲ್ಲಿ ಎನ್ಡಿಎ ಸಂಚಾಲಕರಾಗಿದ್ದ ಜೆಡಿಯು ಅಧ್ಯಕ್ಷ ಶರದ್ ಯಾದವ್ ಅವರು ರಾಜಿನಾಮೆ ನೀಡಿದ್ದಾರೆ. ಅಲ್ಲದೆ ಮೈತ್ರಿಕೂಟದಿಂದ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ತನ್ನ ಮೈತ್ರಿ ಪಕ್ಷಗಳನ್ನು ಗೌರವವಾಗಿ ನಡೆಸಿಕೊಳ್ಳುತ್ತಿಲ್ಲ ಮತ್ತು ಪಕ್ಷಗಳ ಅಭಿಪ್ರಾಯಕ್ಕೆ ಬೆಲೆ ನೀಡುತ್ತಿಲ್ಲ ಎಂದು ಹೇಳಿದರು.
ಮೈತ್ರಿ ಮುರಿದು ಬಿದ್ದಿರುವುದು ದುರದೃಷ್ಟಕರ ಸಂಗತಿ: ಸುಷ್ಮಾ ಸ್ವರಾಜ್
ಇನ್ನು ಬಿಜೆಪಿ ಮತ್ತು ಜೆಡಿಯು ಮೈತ್ರಿ ಅಂತ್ಯಗೊಂಡ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಬಿಜೆಪಿ ಹಿರಿಯ ನಾಯಕಿ ಮತ್ತು ಲೋಕಸಭಾ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರು, ಮೈತ್ರಿ ಮುರಿದು ಬಿದ್ದಿರುವುದು ದುರದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ.
ಒಟ್ಟಾರೆ 2014ರ ಲೋಕಸಭಾ ಚುನಾವಣೆಗೂ ಮುನ್ನವೇ 17 ವರ್ಷಗಳ ಬಿಜೆಪಿ ಮತ್ತು ಜೆಡಿ(ಯು) ಮೈತ್ರಿ ಅಂತ್ಯಗೊಂಡಿದ್ದು, ಇದು ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.