ಬಿಹಾರ ಸರ್ಕಾರ ಸುಭದ್ರ: ನಿತೀಶ್ ಕುಮಾರ್
ಸರ್ಕಾರ ಸುಭದ್ರವಾಗಿದ್ದು, ಸರ್ಕಾರಕ್ಕೆ ಅಗತ್ಯ ಬಹುಮತವಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ.
ಪಾಟ್ನಾ: ಬಿಜೆಪಿ ಬೆಂಬಲ ವಾಪಸ್ ಪಡೆದಿದ್ದರೂ ಬಿಹಾರ ಸರ್ಕಾರ ಸುಭದ್ರವಾಗಿದ್ದು, ಸರ್ಕಾರಕ್ಕೆ ಅಗತ್ಯ ಬಹುಮತವಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ.
ಎನ್‌ಡಿಎ ಮೈತ್ರಿಕೂಟದಿಂದ ಜೆಡಿ(ಯು) ಹೊರಬಂದ ಹಿನ್ನಲೆಯಲ್ಲಿ ನಿತೀಶ್ ನೇತೃತ್ವದ ಬಿಹಾರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂಪಡೆಕೊಂಡಿದೆ. ಹೀಗಾಗಿ ನಿತೀಶ್ ನೇತೃತ್ವದ ಬಿಹಾರ ಸರ್ಕಾರ ಅಲ್ಪಮತಕ್ಕೆ ಕುಸಿಯುವ ಮೂಲಕ ಬಹುಮತ ಕಳೆದುಕೊಂಡಿದೆ ವಿಪಕ್ಷಗಳು ಆರೋಪಿಸುತ್ತಿವೆ. ವಿಪಕ್ಷಗಳ ಆರೋಪವನ್ನು ಅಲ್ಲಗಳೆದಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಬಿಜೆಪಿಯ 11 ಶಾಸಕರು ತಮ್ಮ ಬೆಂಬಲ ವಾಪಸ್ ಪಡೆದಿರುವುದು ನಿಜ. ಆದರೆ ನಮ್ಮ ಸರ್ಕಾರ ಅಲ್ಪಮತಕ್ಕೆ ಕುಸಿದಿಲ್ಲ. ಬಿಜೆಪಿ ಬೆಂಬಲ ವಾಪಸ್‌ಪಡೆದಿರುವುದರಿಂದ ನಮಗೆ ಕೇವಲ 4 ಸ್ಥಾನಗಳ ಕೊರತೆಯಿದ್ದು, 4 ಪಕ್ಷೇತರ ಶಾಸಕರು ತಮಗೆ ಬೆಂಬಲ ನೀಡಲು ಮುಂದಾಗಿದ್ದಾರೆ. ಹೀಗಾಗಿ ನಮ್ಮ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದಾರೆ.
ಈ ನಡುವೆ ಬಿಹಾರ ರಾಜ್ಯಪಾಲ ಡಿ.ವೈ.ಪಾಟೀಲ್ ಅವರನ್ನು ಭೇಟಿಮಾಡಿದ್ದ ನಿತೀಶ್ ಕುಮಾರ್ ಅವರು, ಬಹುಮತ ಬೆಂಬಲ ಸಾಬೀತು ಪಡಿಸಲು ವಿಶ್ವಾಸಮತ ಯಾಚನೆಗೆ ಅವಕಾಶ ನೀಡಬೇಕು ಎಂದು ಕೇಳಿದ್ದಾರೆ. ವಿಶ್ವಾಸಮತ ಯಾಚನೆ ಮಾಡಲು ರಾಜ್ಯಪಾಲರು ಅನುಮತಿ ನೀಡಿದ್ದು, ಜೂನ್ 19 ವಿಶೇಷ ಅಧಿವೇಶನ ಕರೆದಿದ್ದಾರೆ. ಅಂದೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.