ಡಿವೈಎಸ್‌ಪಿ ಕೊಲೆ: ಪರೀಕ್ಷೆಗೆ ರಾಜಾಭಯ್ಯಾ ಸಿದ್ಧ
ಡಿವೈಎಸ್‌ಪಿ ಹತ್ಯೆ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ರಾಜಾಭಯ್ಯಾ ಅವರು ಸುಳ್ಳು ಪತ್ತೆ ಪರೀಕ್ಷೆಗೆ ಸಿದ್ಧರಿರುವುದಾಗಿ ಹೇಳಿದ್ದಾರೆ.
ಲಖನೌ: ಉತ್ತರ ಪ್ರದೇಶದ ಮಾಜಿ ಸಚಿವ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾಭಯ್ಯಾ ಅವರು ತಾವು ಸುಳ್ಳು ಪತ್ತೆ ಪರೀಕ್ಷೆಗೆ ಸಿದ್ಧರಿರುವುದಾಗಿ ಹೇಳಿದ್ದಾರೆ.
ಕುಂದಾಗ್ರಾಮದಲ್ಲಿ ನಡೆದ ಡಿವೈಎಸ್‌ಪಿ ಜಿಯಾ ಉಲ್ ಹಕ್ ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ರಾಜಾಭಯ್ಯಾ ಅವರ ವಿರುದ್ಧ ಸಿಬಿಐ ಅಧಿಕಾರಿಗಳಿಗೆ ಇದುವರೆವಿಗೂ ಯಾವುದೇ ಪ್ರಮುಖ ಸಾಕ್ಷ್ಯಾಧಾರಗಳು ದೊರಕಿರಲಿಲ್ಲ. ಹೀಗಾಗಿ ಸಿಬಿಐ ಅಧಿಕಾರಿಗಳು ರಾಜಾಭಯ್ಯಾ ಅವರನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲು ನ್ಯಾಯಾಲಯದ ಅನುಮತಿ ಕೋರಿದ್ದರು.
ಸಿಬಿಐ ಅಧಿಕಾರಿಗಳ ನಡೆಗೆ ರಾಜಾಭಯ್ಯಾ ಅವರ ಬೆಂಬಲಿಗರು ತೀವ್ರ ವಿರೋಧವ್ಯಕ್ತಪಡಿಸಿದ್ದರು. ಆದರೆ ಮಾಧ್ಯಮಗಳಲ್ಲಿ ರಾಜಾಭಯ್ಯಾ ಅವರ ನಡೆ ಕುರಿತು ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ, ಸ್ವತಃ ರಾಜಾಭಯ್ಯಾ ಅವರು ತಾವು ಸುಳ್ಳುಪತ್ತೆ ಪರೀಕ್ಷೆಗೆ ಸಿದ್ದ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.'ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ ಎಂದಾದಾಗ ನಾನೇಕೆ ಹೆದರಲಿ. ಪರೀಕ್ಷೆಗೆ ಒಳಪಡಲು ನನಗೆ ಯಾವುದೇ ರೀತಿಯ ಹಿಂಜರಿಕೆ ಇಲ್ಲ ಎಂದು ರಾಜಾಭಯ್ಯಾ ಸ್ಪಷ್ಟಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬರುವ ವಿಚಾರಣೆ ವೇಳೆ ಸಿಬಿಐ ವಿಶೇಷ ನ್ಯಾ. ಮಿರ್ಜಾ ಜೀನತ್ ಅವರು ಈ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.