ಪ್ರವಾಹಕ್ಕೆ ಉತ್ತರಾಖಂಡ್ ತತ್ತರ: 73 ಜನರ ಸಾವು
ಪ್ರಚಂಡ ಮಳೆಗೆ ಉತ್ತರಾಖಂಡ್ ತತ್ತರಿಸಿ ಹೋಗಿದ್ದು, ಸುಮಾರು 73 ಜನರು ಸಾವಿಗೀಡಾಗಿದ್ದು, 71 ಸಾವಿರ ಜನರು ನಿರಾಶ್ರಿತರಾಗಿದ್ದಾರೆ.
ಡೆಹ್ರಾಡೂನ್: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಪ್ರಚಂಡ ಮಳೆಗೆ ಉತ್ತರಾಖಂಡ್ ತತ್ತರಿಸಿ ಹೋಗಿದ್ದು, ಸುಮಾರು 73 ಜನರು ಸಾವಿಗೀಡಾಗಿದ್ದಾರೆ ಮತ್ತು 71 ಸಾವಿರ ಜನರು ನಿರಾಶ್ರಿತರಾಗಿದ್ದಾರೆ.
ಉತ್ತರ ಭಾರತ ರಾಜ್ಯಗಳಲ್ಲಿ ಮಳೆಯ ಆರ್ಭಟ ಇಂದೂ ಮುಂದುವರೆದಿದ್ದು, ಇಂದು 11 ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿಗೀಡಾದವರ ಸಂಖ್ಯೆ 73ಕ್ಕೇರಿದೆ. ಅಲ್ಲದೆ ರಾಜ್ಯಾದ್ಯಂತ ಮಳೆಯಿಂದ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ನಿರಾಶ್ರಿತರಾದವರ ಸಂಖ್ಯೆ ಬರೋಬ್ಬರಿ 71,000ಕ್ಕೇರಿದೆ. 1700ಕ್ಕೂ ಅಧಿಕ ಮಂದಿ ಹಿಮಾಚಲಪ್ರದೇಶದಲ್ಲಿ ಸಿಲುಕಿಕೊಂಡಿದ್ದು, ಹೊರಪ್ರದೇಶಗಳಿಗೆ ಸಂಪರ್ಕಕಲ್ಪಿಸುವ ರಸ್ತೆಗಳು ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ.
ಕೇಂದ್ರ ಸರ್ಕಾರ ಅಪಾಯದಲ್ಲಿರುವವರ ರಕ್ಷಣೆಗಾಗಿ ಕೇಂದ್ರೀಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಿಬ್ಬಂದಿಗಳನ್ನು ರವಾನಿಸಿದ್ದು, ರಕ್ಷಣಾ ಸಿಬ್ಬಂದಿಗಳು ಯಾಂತ್ರಿಕ ಬೋಟ್ಗಳ ಸಹಾಯದಿಂದ ಜನರ ರಕ್ಷಣೆಯಲ್ಲಿ ತೊಡಗಿದ್ದಾರೆ. ದೇಶದ ಪ್ರಮುಖ ನದಿಗಳಾದ ಗಂಗಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅದರ ಉಪನದಿಗಳು ಕೂಡ ಉಕ್ಕಿ ಹರಿಯುತ್ತಿವೆ. ಹೀಗಾಗಿ ಗಂಗಾನದಿಯ ತಪ್ಪಲಿನ ಪ್ರದೇಶಗಳು ದ್ವೀಪಗಳಾಗಿ ಮಾರ್ಪಟ್ಟಿವೆ.
ಮಾಧ್ಯಮಗಳ ಗಮನಕ್ಕೆ ಬಂದಂತೆ ಉತ್ತರಾಖಂಡ್ ರಾಜ್ಯವೊಂದರಲ್ಲಿಯೇ ಸುಮಾರು 200ಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ಕುಸಿದಿದ್ದು, ಗಂಗಾನದಿ ತಪ್ಪಲಿನ ಪ್ರದೇಶದ ಸುಮಾರು 25000 ಸಾವಿರಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ. ಅಲ್ಲದೆ ಪ್ರಮುಖ ಪ್ರವಾಸಿ ತಾಣಗಳಾದ ಉತ್ತರಕಾಶಿ, ಗಂಗೋತ್ರಿ, ರುದ್ರಪ್ರಯಾಗ, ಋಷಿಕೇಶ ಸೇರಿದಂತೆ ಮುಂತಾದ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡದಂತೆ ಹಿಮಾಚಲ ಪ್ರದೇಶ ಸರ್ಕಾರ ಎಚ್ಚರಿಕೆ ನೀಡಿದೆ. ಸ್ವತಃ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರು ಈ ಎಚ್ಚರಿಕೆ ನೀಡಿದ್ದು, ಪರಿಸ್ಥಿಯ ರೌಧ್ರತೆಗೆ ಹಿಡಿದ ಕನ್ನಡಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಸೈನಿಕರು ಮತ್ತು ರಕ್ಷಣಾ ಸಿಬ್ಬಂದಿಗಳು ಹೆಲಿಕಾಪ್ಟರ್, ಬೋಟ್ಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಉತ್ತರಾಖಂಡ್ ಮತ್ತು ಹಿಮಾಚಲಪ್ರದೇಶದ ಪ್ರವಾಸಿ ತಾಣಗಳಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳು ಪ್ರವಾಸಿಗರೂ ಕೂಡ ಅಪಾಯಕ್ಕೆ ಸಿಲುಕಿದ್ದು, ಉಭಯ ರಾಜ್ಯಗಳ ಸರ್ಕಾರಗಳು ಸಹಾಯವಾಣಿಗಳನ್ನು ತೆರೆದಿವೆ. ಸಹಾಯವಾಣಿ ದೂರವಾಣಿ ಸಂಖ್ಯೆ ಈ ಕೆಳಗಿನಂತಿವೆ.
0135-2710334
0135-2710335
0135-2710233