ಸ್ಪಾಟ್ ಫಿಕ್ಸಿಂಗ್: ಚಂಡಿಲಾಗೆ ಪೊಲೀಸ್ ವಶಕ್ಕೆ
ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಆರೋಪಿಯಾಗಿರುವ ಕ್ರಿಕೆಟಿಗ ಅಜಿತ್ ಚಂಡೀಲಾ ಅವರನ್ನು ದೆಹಲಿ ನ್ಯಾಯಾಲಯ 3 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ದೆಹಲಿ ವಿಶೇಷ ಪೊಲೀಸರ ಮನವಿಯ ಮೇರೆಗೆ ಕ್ರಿಕೆಟಿಗ ಚಂಡಿಲಾರನ್ನು ನ್ಯಾಯಾಲಯ ಪೊಲೀಸ್ ಬಂಧನಕ್ಕೆ ಒಪ್ಪಿಸಿದೆ. ಚಂಡಿಲಾ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾದ ಮೂವರು ಕ್ರಿಕೆಟಿಗರ ವಿರುದ್ಧ ದೆಹಲಿ ಪೊಲೀಸರು ಮೋಕಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜಯ್ ಕುಮಾರ್ ಜೈನ್ ಅವರು ಚಂಡಿಲಾರನ್ನು ಪೊಲೀಸ್ ವಶಕ್ಕೆ ನೀಡಿದ್ದಾರೆ. ಅಲ್ಲದೆ ಜೂನ್ 20ರೊಳಗೆ ಚಂಡಿಲಾರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಜೂನ್ 22 ರಂದು ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿರುವುದರಿಂದ ಚಂಡಿಲಾರನ್ನು ಜೂನ್ 20ರೊಳಗೆ ಹಾಜರುಪಡಿಸುವಂತೆ ಮತ್ತು ವಿಚಾರಣೆ ವೇಳೆ ಚಂಡಿಲಾ ನೀಡುವ ಪ್ರತಿಯೊಂದು ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ.