ಅಮರನಾಥ್ ಯಾತ್ರೆ ಮೇಲೆ ಉಗ್ರರ ಕೆಂಗಣ್ಣು: ಶಿಂಧೆ
ಅಮರನಾಥ್ ಯಾತ್ರೆ ಮೇಲೆ ಉಗ್ರರ ಕೆಂಗಣ್ಣು ಬಿದ್ದಿದ್ದು, ದಾಳಿ ನಡೆಸಲು ಭಯೋತ್ಪಾದಕರು ಹವಣಿಸುತ್ತಿದ್ದಾರೆ ಎಂದು ಶಿಂಧೆ ಹೇಳಿದ್ದಾರೆ.
ನವದೆಹಲಿ: ಐತಿಹಾಸಿಕ ಪ್ರವಾಸಿ ತಾಣ 'ಅಮರನಾಥ್' ಮೇಲೆ ಉಗ್ರರ ಕೆಂಗಣ್ಣು ಬಿದ್ದಿದ್ದು, ಯಾತ್ರಾರ್ಥಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಭಯೋತ್ಪಾದಕರು ಹವಣಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.
ಇದೇ ಜೂನ್ 28ರಂದು ಅಮರನಾಥ್ ಯಾತ್ರೆ ಪ್ರಾರಂಭಗೊಳ್ಳಲ್ಲಿದ್ದು, ಪವಿತ್ರ ಯಾತ್ರೆಯ ಮೇಲೆ ಭಯೋತ್ಪಾಕರ ಕರಿನೆರಳು ಬಿದ್ದಿದೆ. ಈ ವಿಷಯವನ್ನು ಸ್ವತಃ ಕೇಂದ್ರ ಗೃಹ ಸಚಿವರೇ ತಿಳಿಸಿದ್ದು, ಸರ್ಕಾರ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ಬುಧವಾರ ನವದೆಹಲಿಯಲ್ಲಿ ಮಾತನಾಡಿದ ಸುಶೀಲ್ ಕುಮಾರ್ ಶಿಂಧೆ ಅವರು, ಅಮರನಾಥ್ ಯಾತ್ರೆ ಮೇಲೆ ಭಯೋತ್ಪಾದಕರು ದಾಳಿ ಮಾಡುವ ಕುರಿತು ಮಾಹಿತಿ ಲಭ್ಯವಾಗಿದೆ. ಇದೇ ಜೂನ್ 28ರಿಂದ ಯಾತ್ರೆ ಆರಂಭಗೊಳ್ಳಲ್ಲಿದ್ದು, ಸಾವಿರಾರು ಯಾತ್ರಾರ್ಥಿಗಳು ಈಗಾಗಲೇ ಬುಕ್ ಮಾಡಿಕೊಂಡಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ. ಯಾತ್ರಾ ಸ್ಥಳದ ಭದ್ರತೆಗಾಗಿ ಹೆಚ್ಚುವರಿ ಸೈನಿಕರನ್ನು ರವಾನಿಸಲಾಗುತ್ತದೆ ಎಂದು ಶಿಂಧೆ ತಿಳಿಸಿದರು.
ಇದೇ ವೇಳೆ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಕೆ.ಟಿ ಪರ್ನಾಯಕ್ ಅವರು, ಯಾತ್ರಾರ್ಥಿಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸುವ ಕುರಿತು ಮಾಹಿತಿ ಲಭ್ಯವಾಗಿದೆ. ಹೀಗಾಗಿ ಯಾತ್ರೆ ಸಾಗುವ ದಾರಿಯನ್ನು ಅಸುರಕ್ಷಿತವೆಂದು ಘೋಷಿಸಲಾಗಿದ್ದು, ರಕ್ಷಣಾ ಪಡೆಗಳಿಗೆ ಅಗತ್ಯ ಭದ್ರತೆ ಒದಗಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.