'ಜಿಯಾ' ಆತ್ಮಹತ್ಯೆ: ಸೂರಜ್ ಜಾಮೀನು ಅರ್ಜಿ ವಜಾ
ನವದೆಹಲಿ: ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣ ಸಂಬಂಧ ಪೊಲೀಸ್ ಬಂಧನದಲ್ಲಿರುವ ಆರೋಪಿ ಸೂರಜ್ ಪಾಂಚೋಲಿ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಬಾಲಿವುಡ್ ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣ ಸಂಬಂಧ ಬಂಧನಕ್ಕೀಡಾಗಿರುವ ಸೂರಜ್ ಪಾಂಚೋಲಿ ಅವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿದ್ದು, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಇದಕ್ಕೂ ಮುನ್ನ ಆರೋಪಿ ಸೂರಜ್ ಪಾಂಚೋಲಿ ಅವರ ಪರ ವಕೀಲರು, ಜಿಯಾಖಾನ್ ಮನೆಯಲ್ಲಿ ದೊರೆತ ಪತ್ರ ನಕಲಿ ಎಂದು ಹೇಳಿದ್ದರು. ಅಲ್ಲದೆ ಆತ್ಮಹತ್ಯೆಗೆ ಶರಣಾಗುವ ವ್ಯಕ್ತಿ ಸಾಯುವ ಮುನ್ನ ಐದು ಪುಟಗಳ ಸುದೀರ್ಘ ಪತ್ರವನ್ನು ಬರೆಯಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.
ಅಂತೆಯೇ ಜಿಯಾಖಾನ್ ಬರೆದಿದ್ದಾರೆ ಎನ್ನಲಾಗುತ್ತಿರುವ ಪತ್ರದಲ್ಲಿ ಎಲ್ಲಿಯೂ ಸೂರಜ್ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸಿಲ್ಲ. ಹೀಗಾಗಿ ಈ ಅಂಶವನ್ನು ಪರಿಗಣಿಸಿ ಸೂರಜ್ ಪಾಂಚೋಲಿ ಅವರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಆದರೆ ವಕೀಲರ ವಾದಕ್ಕೆ ಮನ್ನಣೆ ನೀಡದ ನ್ಯಾಯಾಲಯ ಸೂರಜ್ ಪಾಂಚೋಲಿ ಅವರ ಜಾಮೀನು ಅರ್ಜಿಯನ್ನು ಅರ್ಜಿಯನ್ನು ವಜಾಗೊಳಿಸಿದೆ.