ನಾಳೆ ಉತ್ತರಾಖಂಡಕ್ಕೆ ಗೃಹ ಸಚಿವರ ಭೇಟಿ
ಪ್ರವಾಹದಿಂದ ತತ್ತರಿಸಿ ಹೋಗಿರುವ ಉತ್ತರಾಖಂಡ ರಾಜ್ಯಕ್ಕೆ ಶನಿವಾರ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಭೇಟಿ ನೀಡಲಿದ್ದಾರೆ.
ನವದೆಹಲಿ: ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಉತ್ತರಾಖಂಡ ರಾಜ್ಯಕ್ಕೆ ಶನಿವಾರ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಭೇಟಿ ನೀಡಲಿದ್ದಾರೆ.
ಪ್ರವಾಹದಿಂದಾಗಿ ತತ್ತರಿಸಿ ಹೋಗಿರುವ ಉತ್ತರಾಖಂಡ ರಾಜ್ಯದಲ್ಲಿ ನಾಳೆ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಭೇಟಿ ನೀಡಲಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸಲಿದ್ದಾರೆ. ಈ ಬಗ್ಗೆ ಸ್ವತಃ ಶಿಂಧೆ ಅವರು, ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಉತ್ತರಾಖಂಡ ರಾಜ್ಯ ಸೇರಿದಂತೆ ಪ್ರವಾಹ ಪೀಡಿತ ರಾಜ್ಯಗಳಿಗೂ ತಾವು ಭೇಟಿ ನೀಡುವುದಾಗಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಶಿಂಧೆ, ಉತ್ತರಾಖಂಡ, ಹಿಮಾಚಲಪ್ರದೇಶ ರಾಜ್ಯಗಳಲ್ಲಿ ಪ್ರವಾಹದಿಂದಾಗಿ ಈವರೆಗೂ ಸುಮಾರು 205 ಜನ ಸಾವಿಗೀಡಾಗಿದ್ದಾರೆ. 10 ಸಾವಿರ ಪ್ರವಾಸಿಗರು ನಾಪತ್ತೆಯಾಗಿದ್ದು, ಸುಮಾರು 25 ಸಾವಿರ ಮಂದಿ ನಿರಾಶ್ರಿತರಾಗಿದ್ದಾರೆ. ಅಲ್ಲದೆ ಅಪಾಯಕ್ಕೆ ಸಿಲುಕಿದ್ದ ಸುಮಾರು 34000 ಸಾವಿರಕ್ಕೂ ಅಧಿಕ ಮಂದಿಯನ್ನು ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ. 50 ಸಾವಿರ ಮಂದಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಶಂಕೆ ಇದ್ದು, ಅವರನ್ನು ಶೀಘ್ರದಲ್ಲಿಯೇ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುವುದು ಎಂದು ಅವರು ತಿಳಿಸಿದರು.
ಅಂತೆಯೇ ನಾಳೆ ಉತ್ತರಾಖಂಡಕ್ಕೆ ತೆರಳಲಿರುವ ಶಿಂಧೆ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣ ದಳ(ಎನ್ಡಿಎಂಎ)ದೊಂದಿಗೆ ಸಭೆ ನಡೆಸಲಿದ್ದು, ಪ್ರಸಕ್ತ ಬೆಳವಣಿಗೆಗಳ ಕುರಿತು ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.