ಪ್ರವಾಹ ಪೀಡಿತರಿಗೆ ನೆರವಾಗಿ: ಸೋನಿಯಾ
ಭೀಕರ ಪ್ರವಾಹದಿಂದಾಗಿ ಸಂತ್ರಸ್ತರಾಗಿರುವವರಿಗೆ 1 ತಿಂಗಳ ಸಂಬಳ ನೀಡುವ ಮೂಲಕ ನೆರವಾಗಿ ಎಂದು ಸೋನಿಯಾ ಗಾಂಧಿ ಮನವಿ ಮಾಡಿದ್ದಾರೆ.
ನವದೆಹಲಿ: ಭೀಕರ ಪ್ರವಾಹದಿಂದಾಗಿ ಸಂತ್ರಸ್ತರಾಗಿರುವವರಿಗೆ 1 ತಿಂಗಳ ಸಂಬಳ ನೀಡುವ ಮೂಲಕ ನೆರವಾಗಿ ಎಂದು ಸಂಸದ ಮತ್ತು ಶಾಸಕರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹೊರಡಿಸಿರುವ ಈ ಹೇಳಿಕೆಯನ್ನು ಪಕ್ಷದ ವಕ್ತಾರ ಅಜಯ್ ಮಕೇನ್ ಅವರು ನವದೆಹಲಿಯಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಎಲ್ಲ ಪಕ್ಷಗಳ ಸಂಸದರು ಮತ್ತು ಶಾಸಕರು ತಮ್ಮ ಒಂದು ತಿಂಗಳ ಭತ್ಯೆಯನ್ನು ಪ್ರವಾಹ ಪೀಡಿತರಿಗೆ ನೀಡುವ ಮೂಲಕ ನೆರವಾಗುವಂತೆ ಸೋನಿಯಾ ಮನವಿ ಮಾಡಿದ್ದಾರೆ. ಅಂತೆಯೇ ಎಲ್ಲ ಸಂಸದರು ಮತ್ತು ರಾಜ್ಯಸಭಾ ಸದಸ್ಯರು ತಮ್ಮ ಪಾಲಿನ ಪರಿಹಾರ ನಿಧಿಯಿಂದ ತಲಾ 10 ಲಕ್ಷ ರು.ಗಳನ್ನು ನೀಡಬೇಕು ಎಂದು ಸೋನಿಯಾ ಕೇಳಿಕೊಂಡಿದ್ದಾರೆ.
ಪ್ರಸ್ತುತ 203 ಸಂಸದರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ, 72 ರಾಜ್ಯಸಭಾ ಸದಸ್ಯರನ್ನು ಹೊಂದಿದೆ. ಪ್ರವಾಹ ಪೀಡಿತ ಪ್ರದೇಶಗಳ ಅವಲೋಕನಕ್ಕಾಗಿ ಡೆಹ್ರಾಡೂನ್ನಲ್ಲಿ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದ್ದು, ಎಐಸಿಸಿ ಕಾರ್ಯದರ್ಶಿ ಸಂಜಯ್ ಕಪೂರ್ ಮತ್ತು ಮಹೇಂದ್ರ ಜೋಷಿ ಅವರು ಪರಿಹಾರ ಕಾರ್ಯಾಚರಣೆಯ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಅಜಯ್ ಮಕೇನ್ ತಿಳಿಸಿದ್ದಾರೆ.
ಒಟ್ಟಾರೆ ಭೀಕರ ಪ್ರವಾಹಕ್ಕೆ ತತ್ತರಿಸಿ ಹೋಗಿರುವ ಉತ್ತರಾಖಂಡ್ ಸರ್ಕಾರಕ್ಕೆ ನೆರವಿನ ಮಹಾಪೂರವೇ ಹರಿದು ಬರುತ್ತಿದ್ದು, ಈ ಹಿಂದೆ ಕೇಂದ್ರ ಸರ್ಕಾರ ಸಾವಿರ ಕೋಟಿ ರುಗಳ ಪರಿಹಾರ ಘೋಷಣೆ ಮಾಡಿತ್ತು. ಅಂತೆಯೇ ಕರ್ನಾಟಕ ಸರ್ಕಾರದ ಪರವಾಗಿ ಸಚಿವ ಸಂತೋಷ್ ಲಾಡ್ ಅವರು ಈ ಹಿಂದೆ 5 ಕೋಟಿ ರುಪಾಯಿಗಳ ನೆರವನ್ನು ನೀಡಿದ್ದರು.