ಮೇವು ಹಗರಣ: ಜುಲೈ 15ಕ್ಕೆ ತೀರ್ಪು ಸಾಧ್ಯತೆ
ಜುಲೈ 15ರಂದು ಮೇವು ಹಗರಣದ ತೀರ್ಪು ಪ್ರಕಟವಾಗುವ ಸಾಧ್ಯತೆ ಇದ್ದು, ಲಾಲು ಪ್ರಸಾದ್ ಯಾದವ್ ಅವರ ಭವಿಷ್ಯ ನಿರ್ಧಾರವಾಗಲಿದೆ.
ನವದಹೆಲಿ: 1996ರ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಜುಲೈ 15ರಂದು ತೀರ್ಪು ಪ್ರಕಟವಾಗುವ ಸಾಧ್ಯತೆ ಇದ್ದು, ಲಾಲು ಪ್ರಸಾದ್ ಯಾದವ್ ಅವರ ಭವಿಷ್ಯ ನಿರ್ಧಾರವಾಗಲಿದೆ.
ದೇಶಾದ್ಯಂತ ಸಂಚಲನ ಮೂಡಿಸಿದ್ದ 1996ರ ಮೇವು ಹಗರಣದ ತೀರ್ಪು ಮುಂಬರುವ ಜುಲೈ 15 ರಂದು ಪ್ರಕಟವಾಗುವ ಸಾಧ್ಯತೆ ಇದ್ದು, ಸಿಬಿಐ ವಿಶೇಷ ನ್ಯಾಯಮೂರ್ತಿ ಪಿ.ಕೆ.ಸಿಂಗ್ ಅವರು ತೀರ್ಪು ಪ್ರಕಟಿಸಲಿದ್ದಾರೆ. ಬಿಹಾರ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಮತ್ತು ಜಗನ್ನಾಥ್ ಮಿಶ್ರಾ ಅವರ ರಾಜಕೀಯ ಭವಿಷ್ಯ ಇದೀಗ ತೂಗುಯ್ಯಾಲೆಯಲ್ಲಿದೆ. 1996ರಲ್ಲಿ ಬೆಳಕಿಗೆ ಬಂದ ಮೇವು ಹಗರಣದಲ್ಲಿ ಅಧಿಕಾರಿಗಳು ಸರ್ಕಾರಕ್ಕೆ ಸುಳ್ಳು ದಾಖಲೆ ಪತ್ರಗಳನ್ನು ನೀಡಿ ಸುಮಾರು 37.70 ಕೋಟಿ ರುಪಾಯಿಗಳನ್ನು ಅಕ್ರಮವಾಗಿ ಪಡೆದಿದ್ದರು.
ಪ್ರಕರಣ ಬೆಳಕಿಗೆ ಬಂದ ನಂತರ ಹಗರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರ ಹಸ್ತಕ್ಷೇಪವಿರುವ ಕುರಿತು ಶಂಕೆಗಳು ವ್ಯಕ್ತವಾಗಿದ್ದವು. ಅಲ್ಲದೆ ಹಗರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಸಿಬಿಐ ಸಂಸ್ಥೆಗೆ ತನಿಖೆಯ ಜವಾಬ್ದಾರಿ ಹೊರಿಸಿತು. 2000ರ ಏಪ್ರಿಲ್ ತಿಂಗಳಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಲಾಲು ಪ್ರಸಾದ್ ಯಾದವ್ ಮತ್ತು ಜಗನ್ನಾಥ್ ಮಿಶ್ರಾ ಅವರ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲು ಸಿಬಿಐಗೆ ಸೂಚನೆ ನೀಡಿತ್ತು.
ಹಗರಣಕ್ಕೆ ಸಂಬಂಧಿಸಿದಂತೆ ಇದುವರೆವಿಗೂ ಸುಮಾರು 45 ಆರೋಪಿಗಳನ್ನು ವಿಚಾರಣೆ ನಡೆಸಲಾಗಿದ್ದು, ತನಿಖೆ ಬಹುತೇಕ ಪೂರ್ಣಗೊಂಡಿದೆ. ಹೀಗಾಗಿ ಜುಲೈ 15ರಂದು ಲಾಲು ಪ್ರಸಾದ್ ಯಾದವ್ ಮತ್ತು ಜಗನ್ನಾಥ್ ಮಿಶ್ರಾ ಅವರ ಸೇರಿದಂತೆ ಎಲ್ಲಾ 45 ಆರೋಪಿಗಳು ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದು, ಅಂದೇ ತೀರ್ಪು ಹೊರಬೀಳುವ ಸಾಧ್ಯತೆ ಇದೆ.