ಹರಿದ್ವಾರದಲ್ಲಿ 40 ಶವಗಳ ಪತ್ತೆ: 205ಕ್ಕೇರಿದ ಸಾವಿನ ಸಂಖ್ಯೆ
ಭೀಕರ ಪ್ರವಾಹದಲ್ಲಿ ಸಿಲುಕಿ ಸಾವಿಗೀಡಾದವರ ಸಂಖ್ಯೆ ದಿನೇ ದಿನೇ ಏರುತ್ತಿದ್ದು, ಶುಕ್ರವಾರ ಹರಿದ್ವಾರದಲ್ಲಿ ಮತ್ತೆ 40 ಶವಗಳು ಪತ್ತೆಯಾಗಿವೆ.
ಡೆಹ್ರಾಡೂನ್: ಉತ್ತರ ಭಾರತದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ಸಿಲುಕಿ ಸಾವಿಗೀಡಾದವರ ಸಂಖ್ಯೆ ದಿನೇ ದಿನೇ ಏರುತ್ತಿದ್ದು, ಶುಕ್ರವಾರ ಹರಿದ್ವಾರದಲ್ಲಿ ಮತ್ತೆ 40 ಶವಗಳು ಪತ್ತೆಯಾಗಿವೆ.
ಪ್ರವಾಹಕ್ಕೆ ಸಿಲುಕಿ ಬಹುತೇಕ ಮುಳುಗಡೆಯಾಗಿದ್ದ ಪವಿತ್ರ ಯಾತ್ರಾ ಸ್ಥಳಗಳಾದ ಹರಿದ್ವಾರ, ಕೇದಾರನಾಥ ದೇವಸ್ಥಾನ, ಬದ್ರಿನಾಥದಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆಯೇ ನೂರಾರು ಶವಗಳು ಕಣ್ಣಿಗೆ ಗೋಚರವಾಗುತ್ತಿವೆ. ಪವಿತ್ರ ಧಾರ್ಮಿಕ ಸ್ಥಳಗಳಲ್ಲಿ ಇದೀಗ ಸ್ಮಶಾನ ಮೌನ ಆವರಿಸಿದೆ. ದೇವಾಲಯದ ಆವರಣಗಳಲ್ಲಿಯೇ ಶವಗಳು ಗೋಚರಿಸುತ್ತಿದ್ದು, ಇಂದು ಹರಿದ್ವಾರ ಪ್ರದೇಶವೊಂದರಲ್ಲಿಯೇ ಸುಮಾರು 40 ಶವಗಳು ಪತ್ತೆಯಾಗಿವೆ. ಅಂತೆಯೇ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 205ಕ್ಕೇರಿದೆ. ಕೇದಾರನಾಥ ದೇವಸ್ಥಾನ ಮತ್ತು ಬದ್ರಿನಾಥದ ಅವರಣದಲ್ಲಿ ಸುಮಾರು 9000 ಸಾವಿರ ಜನ ನಿರಾಶ್ರಿತರಾಗಿದ್ದು, ನೀರು ಮತ್ತು ಆಹಾರಕ್ಕಾಗಿ ಪರದಾಡುತ್ತಿದ್ದಾರೆ.
ಪ್ರವಾಹ ಉಂಟಾದ ಸ್ಥಳಗಳಲ್ಲಿ ರಕ್ಷಣಾಕಾರ್ಯಾಚರಣೆ ಭರದಿಂದ ಸಾಗಿದ್ದು, ಇಂಡೋ-ನೇಪಾಳ ಗಡಿ ರಕ್ಷಣಾ ಪಡೆಯ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ನಡುವೆ ಉತ್ತರಾಖಂಡ್ ರಾಜ್ಯದ ಪ್ರಧಾನ ಕಾರ್ಯದರ್ಶಿ ರಾಕೇಶ್ ಶರ್ಮಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಗಾಯಾಳುಗಳ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಅಪಾರ ಪ್ರಮಾಣದಲ್ಲಿ ಏರಿಕೆಯಾಗುವ ಸಂಶಯ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಮೂಲಗಳ ಪ್ರಕಾರ ಕೇದಾರನಾಥ ಪ್ರದೇಶವೊಂದರಲ್ಲಿಯೇ ಸುಮಾರು 30 ಸಾವಿರ ಯಾತ್ರಿಕರು ಇದ್ದರು. ಆ ಪೈಕಿ ಸುಮಾರು 10 ಸಾವಿರ ಪ್ರವಾಸಿಗರನ್ನು ರಕ್ಷಿಸಲಾಗಿದೆ. ಆದರೆ ಉಳದ 20 ಸಾವಿರ ಮಂದಿ ಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ. ಹೀಗಾಗಿ ಸಾವುನೋವುಗಳ ಸಂಖ್ಯೆ ಅಪಾರ ಪ್ರಮಾಣದಲ್ಲಿ ಹೆಚ್ಚಾಗುವ ಕುರಿತು ಶಂಕೆವ್ಯಕ್ತವಾಗುತ್ತಿದೆ. ಕೇದಾರನಾಥ ಇತಿಹಾಸದಲ್ಲಿಯೇ ಇಷ್ಟು ದೊಡ್ಡ ಪ್ರಾಕೃತಿಕ ದುರಂತ ಸಂಭವಿಸಿರಲಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಂತ್ರಸ್ತರಿಗೆ ಸೂಕ್ತ ಪರಿಹಾರ; 45 ಕಾಪ್ಟರ್‌ಗಳ ಮೂಲಕ ಕಾರ್ಯಾಚರಣೆ: ಮನೀಶ್ ತಿವಾರಿ
ಈ ನಡುವೆ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಮನೀಶ್ ತಿವಾರಿ ಅವರು, ಸಂತ್ರಸ್ತರ ರಕ್ಷಣೆಗಾಗಿ ನಡೆಯುತ್ತಿರುವ ಕಾರ್ಯಾಚರಣೆ ಮುಂದುವರೆದಿದೆ. ಸೇನಾಪಡೆಯ ಸುಮಾರು 45 ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಕಾರ್ಯಾಚರಣೆಗಾಗಿ ಬಳಸಿಕೊಳ್ಳಲಾಗುತ್ತಿದೆ. ರಕ್ಷಣೆ ಮಾಡಿದ ಪ್ರವಾಸಿಗರನ್ನು ತಮ್ಮ ತಮ್ಮ ಸ್ಥಳಗಳಿಗೆ ತಲುಪಿಸಲು ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದ್ದು, ಇದಕ್ಕಾಗಿ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.
ಅಲ್ಲದೆ ಸಂತ್ರಸ್ಥರಿಗೆ ಉಚಿತ ಪ್ರಯಾಣಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಅಂತೆಯೇ ಘಟನಾ ಸ್ಥಳಗಳಲ್ಲಿ ನಿರಾಶ್ರಿತರಾಗಿರುವ ಸುಮಾರು 25 ಸಾವಿರ ಮಂದಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಹೇಳಿದ ತಿವಾರಿ, ಇದಕ್ಕಾಗಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು. ಇದಕ್ಕೂ ಮೊದಲು ಪ್ರವಾಹ ಪೀಡಿತ ಉತ್ತರಾಖಂಡ್ ರಾಜ್ಯಕ್ಕೆ ಪರಿಹಾರಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ, ತತ್‌ಕ್ಷಣ 145 ಕೋಟಿ ರುಗಳನ್ನು ಬಿಡುಗಡೆ ಮಾಡುತ್ತಿರುವುದಾಗಿ ಸಚಿವ ಮನೀಶ್ ತಿವಾರಿ ಹೇಳಿದರು.