ಉತ್ತರಾಖಂಡ್: ಮತ್ತೆ ಮಳೆ ಸಾಧ್ಯತೆ
ಉತ್ತರಾಖಂಡ್ ನಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದ್ದು, ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಸರ್ಕಾರ ಸೂಚಿಸಿದೆ.
ನವದೆಹಲಿ: ಉತ್ತರಾಖಂಡ್ ರಾಜ್ಯದಲ್ಲಿ ಮೂರು ದಿನಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದ್ದು, ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ರಕ್ಷಣಾ ತಂಡಗಳಿಗೆ ಸರ್ಕಾರ ಸೂಚಿಸಿದೆ.
ಸತತ ಮಳೆ ಮತ್ತು ಪ್ರವಾಹದಿಂದ ತತ್ತರಿಸಿ ಹೋಗಿರುವ ಉತ್ತರಾಖಂಡ್ನಲ್ಲಿ ಸೋಮವಾರದಂದು ಮತ್ತೆ ಮಳೆ ಪ್ರಾರಂಭವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಕೇಂದ್ರ ಸರ್ಕಾರ ರಕ್ಷಣಾ ಸಿಬ್ಬಂದಿಗಳಿಗೆ ಸೂಚಿಸಿದೆ. ನವದೆಹಲಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ ಅಜಿತ್ ಸೇಠ್ ಅವರು ಉತ್ತರಾಖಂಡ್ನ ಪ್ರಸ್ತುತ ಬೆಳವಣಿಗೆಗಳನ್ನು ವಿವರಿಸಿದ್ದಾರೆ. ಅಲ್ಲದೆ ಮುಂದಿನ ಸೋಮವಾರ ಮತ್ತೆ ಮಳೆಯಾಗುವ ಕುರಿತು ಹವಾಮಾನ ಇಲಾಖೆಯ ಎಚ್ಚರಿಕೆಯನ್ನು ಸಹ ಅಜಿತ್ ಸೇಠ್ ಪ್ರಧಾನಿಗಳಿಗೆ ತಿಳಿಸಿದ್ದು, ಪ್ರಧಾನಿ ಮನಮೋಹನ್ ಸಿಂಗ್ ಅವರು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಉತ್ತರಾಖಂಡ್ ರಾಜ್ಯದಲ್ಲಿ ಬೀಡುಬಿಟ್ಟಿರುವ ಕೇಂದ್ರಸರ್ಕಾರದ ಕಾರ್ಯದರ್ಶಿ ಅಜಿತ್ ಸೇಠ್ ಅವರು, ಪ್ರತಿ ದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಮಾಡಿ ಸ್ಥಿತಿಗತಿ ವರದಿ ನೀಡುತ್ತಿದ್ದಾರೆ. ಭೇಟಿ ವಿವರ ಮಾಧ್ಯಮಗಳಿಗೆ ಲಭ್ಯವಾಗಿದ್ದು, ಉತ್ತರಾಖಂಡ್ನಲ್ಲಿ ಈಗಾಗಲೇ ಸುಮಾರು 66 ಸಾವಿರ ಪ್ರವಾಸಿಗರನ್ನು ರಕ್ಷಿಸಲಾಗಿದೆ. ಬೆಟ್ಟಗುಡ್ಡಗಳಲ್ಲಿ ಮತ್ತು ಕೇದಾರನಾಥ ಸೇರಿದಂತೆ ಹಲವು ಧಾರ್ಮಿಕ ಸ್ಥಳಗಳಲ್ಲಿರುವ ಮತ್ತಷ್ಟು ಪ್ರವಾಸಿಗರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ಮತ್ತೆ 500 ಪ್ಯಾರಾಮಿಲಿಟರಿ ಪಡೆಗಳನ್ನು ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳಲು ಪ್ರಧಾನಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಉತ್ತರಾಖಂಡದಲ್ಲಿ ಇಂಡೋ-ಟಿಬೆಟ್ ಪೊಲೀಸರು, ಗಡಿ ಭದ್ರತಾ ಪಡೆಗಳು, ರಾಷ್ಟ್ರೀಯ ವಿಪತ್ತು ದಳ ಮತ್ತು ಅರೆಸೇನಾ ಪಡೆಗಳ ಸುಮಾರು 6,200 ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಮತ್ತಷ್ಟು ಸೈನಿಕರು ಈ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.