ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಲ್ಲಿದ್ದಲು ಹಗರಣ: ಜಿಂದಾಲ್ ನಿವಾಸದಲ್ಲಿ ಸಿಬಿಐ ಶೋಧ

Srinivasa Murthy VN
Updated On : 22 Jun 2013, 4:42 am

ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನವೀನ್ ಜಿಂದಾಲ್ ಅವರ ದೆಹಲಿ ನಿವಾಸದಲ್ಲಿ ಸಿಬಿಐ ಅಧಿಕಾರಿಗಳು ಮತ್ತೆ ಶೋಧ ಕಾರ್ಯ ನಡೆಸಿದ್ದಾರೆ.

ಕಳೆದ ಜೂನ್ 11ರಂದು ನಡೆದಿದ್ದ ಶೋಧ ಕಾರ್ಯದ ವೇಳೆ ಜಿಂದಾಲ್ ನಿವಾಸದಲ್ಲಿ ಕೆಲ ಲಾಕರ್‌ಗಳಿಗೆ ಬೀಗ ಜಡಿಯಲಾಗಿತ್ತು. ಅವುಗಳನ್ನು ತೆರೆಯಲು ಸ್ವತಃ ನವೀನ್ ಜಿಂದಾಲ್ ಅವರಿಂದ ಮಾತ್ರ ಸಾಧ್ಯವಿತ್ತು. ಆದರೆ ಅಂದು ನವೀನ್ ಜಿಂದಾಲ್ ಅವರು ವಿದೇಶ ಪ್ರವಾಸದಲ್ಲಿದ್ದರು. ಹೀಗಾಗಿ ಅಂದು ಲಾಕರ್‌ಗಳನ್ನು ಸೀಲ್ ಮಾಡಿದ್ದ ಅಧಿಕಾರಿಗಳು, ಅಲ್ಲಿ ಮತ್ತೆ ಶೋಧಕಾರ್ಯ ನಡೆಸಿದ್ದಾರೆ.

ಈ ಹಿಂದೆ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಜೂನ್ 11 ರಂದು ನವೀನ್ ಜಿಂದಾಲ್ ಮತ್ತು ಕಲ್ಲಿದ್ದಲು ಖಾತೆಯ ರಾಜ್ಯ ಸಚಿವ ದಾಸರಿ ನಾರಾಯಣ ರಾವ್ ಅವರ ವಿರುದ್ಧ ಸಿಬಿಐ ಚಾರ್ಜ್ ಶೀಟ್ ದಾಖಲಿಸಿತ್ತು. ಅಂದೇ ಈ ಇಬ್ಬರು ನಾಯಕರಿಗೆ ಸೇರಿದ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದ, ಸಿಬಿಐ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಆದರೆ ನವೀನ್ ಜಿಂದಾಲ್ ಅವರ ದೆಹಲಿ ನಿವಾಸದ ಕೆಲ ಲಾಕರ್‌ಗಳನ್ನು ತೆರೆಯುವಲ್ಲಿ ಸಿಬಿಐ ಅಧಿಕಾರಿಗಳು ವಿಫಲರಾಗಿದ್ದರು.

ಹೀಗಾಗಿ ಜಿಂದಾಲ್ ಅವರು ಭಾರತಕ್ಕೆ ಬಂದ ನಂತರ ಆ ಲಾಕರ್‌ಗಳನ್ನು ತೆರೆಯಲು ಸಿಬಿಐ ಅಧಿಕಾರಿಗಳು ಮುಂದಾಗಿದ್ದಾರೆ. ಸಿಬಿಐ ಅಧಿಕಾರಿಗಳ ದಾಳಿ ಕುರಿತು ಮಾತನಾಡಿದ ನವೀನ್ ಜಿಂದಾಲ್ ಅವರು, ದಾಳಿ ಬಗ್ಗೆ ಮಾಹಿತಿ ಇದೆ. ಆದರೆ ನಾನು ಪ್ರಸ್ತುತ ಭಾರತದಲ್ಲಿಯೇ ಇದ್ದರು ಕೂಡ ನನ್ನ ನಿವಾಸದಲ್ಲಿ ಇಲ್ಲ. ಕೆಲಸದ ನಿಮಿತ್ತ ನಾನು ಓಡಾಡುತ್ತಿದ್ದೇನೆ. ಹೀಗಾಗಿ ಸಿಬಿಐ ಅಧಿಕಾರಿಗಳಿಗೆ ನಾನು ಎಲ್ಲ ರೀತಿಯ ಮಾಹಿತಿಗಳನ್ನು ನೀಡಿದ್ದು, ಮುಂದೆಯು ಕೂಡ ತನಿಖೆಗೆ ಸಹಕರಿಸುತ್ತೇನೆ. ತನಿಖೆಯಿಂದ ನಾನು ನಿರ್ದೋಷಿ ಎಂಬುದು ಸಾಬೀತಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಬಾರಿಯ ಸಿಬಿಐ ಅಧಿಕಾರಿಗಳ ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದ್ದ ದಾಖಲೆಗಳ ಅನ್ವಯ, ಹಗರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಮಾಹಿತಿಗಳು ಲಭ್ಯವಾಗಿವೆ. ಮೂಲಗಳ ಪ್ರಕಾರ ಲಭ್ಯವಾದ ಮಾಹಿತಿಗಳಂತೆ ಕಲ್ಲಿದ್ದಲು ರಾಜ್ಯ ಸಚಿವರಾಗಿದ್ದ ದಾಸರಿ ನಾರಾಯಣ ರಾವ್ ಅವರ ಪತ್ನಿಯ ಮಾಲೀಕತ್ವದ ಸೌಭಾಗ್ಯ ಮೀಡಿಯಾ ಸಂಸ್ಥೆಗೆ ಕೇವಲ ಒಂದು ವರ್ಷದ ಅವಧಿಯಲ್ಲಿ ಜಿಂದಾಲ್ ಸಂಸ್ಥೆ ಸುಮಾರು 2.25 ಕೋಟಿ ಹಣವನ್ನು ವರ್ಗಾಯಿಸಿದೆ. ಇದೇ ಅಂಶ ಇದೀಗ ಮಹತ್ವ ಪಡೆದುಕೊಂಡಿದ್ದು, ಸಿಬಿಐ ಅಧಿಕಾರಿಗಳು ಇದೇ ಅಂಶವನ್ನು ಮುಂದಿಟ್ಟುಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement