ಪತ್ನಿಯನ್ನೇ ತುಂಡುತುಂಡಾಗಿ ಕತ್ತರಿಸಿದ ಮಾಜಿ ಕರ್ನಲ್
ಭುವನೇಶ್ವರ: ಮಾಜಿ ಸೈನಿಕಾಧಿಕಾರಿಯೊಬ್ಬ ತನ್ನ ಸ್ವಂತ ಪತ್ನಿಯನ್ನೇ ಕೊಂದು, ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಡಬ್ಬಗಳಲ್ಲಿ ತುಂಬಿಸಿಟ್ಟಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.
ಭುವನೇಶ್ವರ ನಿವಾಸಿಯಾಗಿರುವ ಸೋಮನಾಥ್ ಪರಿಡಾ ಎಂಬ ಮಾಜಿ ಸೈನಿಕಾಧಿಕಾರಿ ತನ್ನ ಪತ್ನಿ ಉಶಾಶ್ರೀ ಎಂಬ ಮಹಿಳೆಯನ್ನು ಆಮಾನುಷವಾಗಿ ಕೊಂದುಹಾಕಿದ್ದಾನೆ. ಅಲ್ಲದೆ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಸ್ಟೀಲ್ ಡಬ್ಬಗಳಲ್ಲಿ ತುಂಬಿಸಿಟ್ಟಿರುವ ಸಂಗತಿ ಪೊಲೀಸ್ ಶೋಧದಿಂದ ಬಹಿರಂಗವಾಗಿದೆ. ಶನಿವಾರ ಪರಿಡಾ ಅವರ ಮನೆಗೆ ಭೇಟಿ ನೀಡಿದ್ದ ಉಶಾಶ್ರೀ ಅವರ ಸಂಬಂಧಿಕರು, ಉಶಾಶ್ರೀ ಅವರ ಬಗ್ಗೆ ವಿಚಾರಿಸಿದಾಗ ಸೋಮನಾಥ್ ಅನುಮಾನ ಮೂಡುವಂತೆ ಹೇಳಿಕೆ ನೀಡಿ ಅವರನ್ನು ಬಲವಂತವಾಗಿ ಮನೆಯಿಂದ ಹೊರಹಾಕಿದ್ದನು. ಸೋಮನಾಥ್ ನಡವಳಿಕೆಯನ್ನು ಅನುಮಾನಿಸಿದ ಸಂಬಂಧಿಕರು ಕೂಡಲೇ ಸ್ಥಳೀಯ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸಂಬಂಧಿಕರ ದೂರಿನ ಅನ್ವಯ ನಾಯ್‌ಪಲ್ಲಿಯಲ್ಲಿರುವ ಪರಿಡಾ ನಿವಾಸಕ್ಕೆ ಭೇಟಿ ನೀಡಿದ್ದ ಪೊಲೀಸರು ಶೋಧ ಕಾರ್ಯ ನಡೆಸಿದರು. ಈ ವೇಳೆ ಸೋಮನಾಥ್ ಪತ್ನಿ ಉಶಾಶ್ರೀ ಅವರ ದೇಹದ ಅಂಗಾಗಗಳು ಅಡುಗೆ ಮನೆಯ ಸ್ಟೀಲ್ ಡಬ್ಬಗಳಲ್ಲಿ ತುಂಬಿಸಿಟ್ಟಿರುವ ದೃಶ್ಯವನ್ನು ಕಂಡು ಪೊಲೀಸರೇ ಹೌಹಾರಿದ್ದಾರೆ. ತನ್ನ ಪತ್ನಿಯ ದೇಹವನ್ನು ಸೋಮನಾಥ್ ತುಂಡು ತುಂಡಾಗಿ ಕತ್ತರಿಸಿ ಸುಮಾರು 22 ದೊಡ್ಡ ಸ್ಟೀಲ್ ಡಬ್ಬಗಳಲ್ಲಿ ತುಂಬಿಸಿಟ್ಟಿದ್ದು, ಅದೇ ಅಡುಗೆ ಮನೆಯ ಮತ್ತೊಂದು ಬದಿಯಲ್ಲಿ ದೇಹವನ್ನು ಕತ್ತರಿಸಲು ಸೋಮನಾಥ್ ಬಳಸಿದ್ದ ವಿವಿಧ ಹರಿತವಾದ ಆಯುಧಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಸೋಮನಾಥ್‌ನನ್ನು ವಿಚಾರಿಸಿದಾಗ ಆತ ಕೌಟುಂಬಿಕ ಕಲಹದಿಂದಾಗಿ ತನ್ನ ಪತ್ನಿಯನ್ನು ಕೊಂದೆ. ಆದರೆ ಈ ವಿಷಯವನ್ನು ಗೌಪ್ಯವಾಗಿಡಲು ಆಕೆಯ ದೇಹವನ್ನು ಕತ್ತರಿಸಿ, ಅನಂತರ ಅವುಗಳನ್ನು ವಿಸರ್ಜಿಸಲು ಮುಂದಾಗಿದ್ದೆ ಎಂದು ಹೇಳಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಭುವನೇಶ್ವರ ಪೊಲೀಸರು ಸೋಮನಾಥ್‌ನನ್ನು ಬಂಧಿಸಿದ್ದು, ಆತ ಬಳಸಿದ್ದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಉಶಾಶ್ರೀ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿರುವ ಪೊಲೀಸರು, ವಿದೇಶದಲ್ಲಿರುವ ಅವರ ಮಗಳಿಗೆ ವಿಷಯ ತಿಳಿಸಿದ್ದಾರೆ.