ರಕ್ಷಣಾಕಾರ್ಯಕ್ಕೆ 3 ದಿನ ಗಡುವು: ಶಿಂಧೆ
ಪ್ರವಾಹದಿಂದ ಅಪಾಯದಲ್ಲಿರುವ ಸಾವಿರಾರು ಮಂದಿ ಪ್ರವಾಸಿಗರನ್ನು ರಕ್ಷಿಸಲು ಗೃಹ ಸಚಿವ ಶಿಂಧೆ ಅವರು 3 ದಿನಗಳ ಗಡುವು ನೀಡಿದ್ದಾರೆ.
ಡೆಹ್ರಾಡೂನ್: ಉತ್ತರಾಖಂಡ್ ರಾಜ್ಯದಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಸಾವಿರಾರು ಮಂದಿ ಪ್ರವಾಸಿಗರನ್ನು ರಕ್ಷಿಸಲು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು 3 ದಿನಗಳ ಗಡುವು ನೀಡಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ಭೇಟಿ ನೀಡಿದ ಶಿಂಧೆ, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಎದುರಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ನಿಧಾನವಾಗುತ್ತಿದೆ ಎಂದು ಹೇಳಿದರು. ಅಲ್ಲದೆ ಇನ್ನು ಕೂಡ ಉತ್ತರಾಖಂಡ್ ಬೆಟ್ಟ-ಗುಡ್ಡಗಳಲ್ಲಿ ಸುಮಾರು 40 ಸಾವಿರ ಪ್ರವಾಸಿಗರು ಅಪಾಯದಲ್ಲಿ ಸಿಲುಕಿದ್ದು, ಕೂಡಲೇ ಅವರನ್ನು ಅಲ್ಲಿಂದ ತೆರವುಗೊಳಿಸಬೇಕಿದೆ. ಹೀಗಾಗಿ ಇನ್ನು ಮೂರು ದಿನಗಳಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳಿಸುವಂತೆ ಸೈನಿಕರಿಗೆ ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಎಂದು ಶಿಂಧೆ ಹೇಳಿದರು.
'ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದ್ದು, ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ವೈಮಾನಿಕ ಕಾರ್ಯಾಚರಣೆಗೆ ತೊಡಕಾಗುತ್ತಿದೆ. ಪ್ರವಾಹದಿಂದಾಗಿ ಕೇದಾರನಾಥ್, ಬದ್ರಿನಾಥ್, ಗೌರಿಕುಂಡ್ ಮತ್ತು ಪಂಡುಕೇಶ್ವರ್ ಯಾತ್ರಾಸ್ಥಳಗಳಲ್ಲಿ ರಸ್ತೆ ಸಂಪರ್ಕ ಸಂಪೂರ್ಣ ಹಾಳಾಗಿದ್ದು, ಅಲ್ಲಿ ತಾತ್ಕಾಲಿಕ ಮೇಲ್ಸೇತುವೆಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಸರ್ಕಾರ ಮತ್ತು ರಕ್ಷಣಾ ಸಿಬ್ಬಂದಿಗಳ ಸಮನ್ವಯ ಕೊರತೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ನಿಧಾನವಾಗುತ್ತಿದೆ' ಎಂದು ಶಿಂಧೆ ಹೇಳಿದರು.
ರಕ್ಷಣೆಗೆ ಲಂಚ ಕೇಳುತ್ತಿರುವ ರಕ್ಷಣಾ ಸಿಬ್ಬಂದಿಗಳು
ಈ ನಡುವೆ ಪ್ರವಾಹ ಪೀಡಿತ ಕೇದಾರನಾಥದಲ್ಲಿ ರಕ್ಷಣಾಕಾರ್ಯಾಚರಣೆ ಭರದಿಂದ ಸಾಗುತ್ತಿದ್ದರು ಕೂಡ, ಇತ್ತ ರಕ್ಷಣೆಗೆ ಸಿಬ್ಬಂದಿಗಳು ಲಂಚ ಕೇಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕೇದಾರನಾಥ ದೇವಾಲಯದ ಆವರಣದಲ್ಲಿ ಕೆಲ ಪ್ರವಾಸಿಗರು ಇಂದು ಧರಣಿ ಕುಳಿತು ಅಧಿಕಾರಿಗಳ ಈ ಲಂಚಗುಳಿತನದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಕೇದಾರನಾಥದಲ್ಲಿ ಸಿಲುಕಿರುವ ಪ್ರವಾಸಿಗರನ್ನು ಮತ್ತು ಅವರ ಕುಟುಂಬದವರನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲು ಸಿಬ್ಬಂಧಿಗಳು ಮತ್ತು ಅಧಿಕಾರಿಗಳು 1 ಸಾವಿರ ರು. ಲಂಚ ಕೇಳುತ್ತಿದ್ದಾರೆ. ಹಣ ನೀಡಿದವರನ್ನು ಮಾತ್ರ ಸುರಕ್ಷಿತ ಪ್ರದೇಶಗಳಿಗೆ ರವಾನಿಸುತ್ತಿದ್ದಾರೆ ಎಂಬ ಕೂಗುಗಳು ಕೇಳಿಬರುತ್ತಿವೆ.
ಆದರೆ ಈ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಅವರು ಈ ಆರೋಪವನ್ನು ನಿರಾಕರಿಸಿದ್ದಾರೆ. ತಾವು ಯಾರೊಬ್ಬರ ಬಳಿಯಲ್ಲಿಯೂ ಹಣ ಕೇಳಿಲ್ಲ ಎಂದು ಹೇಳುತ್ತಿದ್ದಾರೆ. ಒಟ್ಟಾರೆ ಭೀಕರ ಪ್ರವಾಹದಿಂದ ನಲುಗಿ ಹೋಗಿರುವ ಉತ್ತರಾಖಂಡ್ ರಾಜ್ಯದಲ್ಲಿ ರಕ್ಷಣಾ ಕಾರ್ಯಾಚರಣೆಗೂ ಲಂಚ ಕೇಳುತ್ತಿರುವುದು ಅಧಿಕಾರಿಗಳ ಲಂಚಗುಳಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.