ಶ್ರೀನಗರದಲ್ಲಿ ಉಗ್ರರ ದಾಳಿ: ಇಬ್ಬರು ಪೊಲೀಸರ ಹತ್ಯೆ
ಶ್ರೀನಗರ: ಶ್ರೀನಗರದಲ್ಲಿ ಉಗ್ರರು ದಾಳಿ ನಡೆಸಿದ್ದು, ಇಬ್ಬರು ಪೊಲೀಸರನ್ನು ಹತ್ಯೆಗೈದಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಇನ್ನು ಮೂರು ದಿನಗಳಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಭೇಟಿ ನೀಡಲಿದ್ದು, ಇದೇ ವೇಳೆ ದುಷ್ಕೃತ್ಯವೆಸಗಲು ಉಗ್ರರು ಹವಣಿಸುತ್ತಿದ್ದಾರೆ. ಇದರ ಮೊದಲ ಭಾಗವಾಗಿ ಇಂದು ಶ್ರೀನಗರದ ಪ್ರತಿಷ್ಠಿತ ರಸ್ತೆಗಳಲ್ಲಿ ಪೊಲೀಸರನ್ನು ಹತ್ಯೆಗೈಯುವ ಮೂಲಕ ಜನತೆಯಲ್ಲಿ ಭೀತಿ ಹುಟ್ಟಿಸಿದ್ದಾರೆ. ಶ್ರೀನಗರದ ಜಂಹಗೀರ್ ಚೌಕ್ ಮತ್ತು ಸರೈ ಬಲಾ ಪ್ರದೇಶಗಳಲ್ಲಿ ಗಸ್ತು ತಿರುಗಿತ್ತಿದ್ದ ಮುಖ್ಯ ಪೇದೆ ಮಹಮದ್ ಮಕ್ಬೂಲ್ ಮತ್ತು ಸಾಮಾನ್ಯ ಪೇದೆ ನಜೀರ್ ಅಹ್ಮದ್ ಅವರನ್ನು ಉಗ್ರರು ಗುಂಡಿಕ್ಕಿ ಕೊಂದು ಹಾಕಿದ್ದಾರೆ.
ಗನ್ಗೆ ಸೈಲೆನ್ಸರ್ ಬಳಸಿ ಹೆಚ್ಚಿನ ಶಬ್ಧವಾಗದಂತೆ ಇಬ್ಬರು ಪೊಲೀಸರನ್ನು ಕೊಂದು ಹಾಕಿದ್ದಾರೆ. ಗುಂಡೇಟಿನಿಂದಾಗಿ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಹಮದ್ ಮಕ್ಬೂಲ್ ಅವರನ್ನು ಸ್ಥಳೀಯರು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಲು ಮುಂದಾದರು. ಆದರೆ ಮಾರ್ಗ ಮಧ್ಯೆ ಅವರು ಅಸುನೀಗಿದ್ದು, ಮತ್ತೋರ್ವ ಪೇದೆ ನಜೀರ್ ಅಹ್ಮದ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದೇ ಜೂನ್ 25ರಂದು ಪ್ರಧಾನಿ ಮನ್ಮೋಹನ್ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಬಣಿಹಾಲ್ ಮತ್ತು ಘಾಜಿಗುಂಡ್ ನಡುವೆ ನೂತನವಾಗಿ ಸಂಚರಿಸಲಿರುವ ರೈಲನ್ನು ಉದ್ಘಾಟನೆ ಮಾಡಲಿದ್ದು, ಮರುದಿನವೇ ಅಂದರೆ ಜೂನ್ 26ರಂದು ನವದೆಹಲಿಗೆ ವಾಪಸಾಗಲಿದ್ದಾರೆ. ಪ್ರಧಾನಿಗಳ ಈ ಭೇಟಿಗೆ ಕಾಶ್ಮೀರದ ಮೂಲಭೂತವಾದಿಗಳು ವಿರೋಧ ವ್ಯಕ್ತಪಡಿಸಿದ್ದು, ಪ್ರಧಾನಿಗಳಿಗೆ ಹೆಚ್ಚುವರಿ ಭದ್ರತೆ ನೀಡಲು ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ.