ಕಾಡಾನೆ ದಾಳಿಗೆ ಪತ್ರಕರ್ತ ಬಲಿ
ಹೊಸಕೋಟೆ: ರಾಜ್ಯಕ್ಕೆ ದಾಳಿ ಇಟ್ಟಿರುವ ಸುಮಾರು 17 ಕಾಡಾನೆಗಳ ದಾಳಿಗೆ ಪತ್ರಕರ್ತನೊಬ್ಬ ಬಲಿಯಾಗಿದ್ದು, ನೂರಾರು ಎಕರೆ ಬೆಳೆ ನಾಶವಾಗಿದೆ.
ನಿನ್ನೆ ತಮಿಳುನಾಡಿನಿಂದ ರಾಜ್ಯಕ್ಕೆ ಆಗಮಿಸಿರುವ 17ಕ್ಕೂ ಹೆಚ್ಚಿನ ಆನೆಗಳ ಹಿಂಡು ಭಾನುವಾರ ಹೊಸಕೋಟೆಯ ಬಳಿ ಇರುವ ಚಿಕ್ಕತಗಳಿ ಗ್ರಾಮದಲ್ಲಿ ಬೀಡುಬಿಟ್ಟಿದ್ದವು. ಇಂದು ಮಧ್ಯಾಹ್ನದ ವೇಳೆಯಲ್ಲಿ ಮಂಜುನಾಥ್ ಎಂಬ ಸ್ಥಳೀಯ ಪತ್ರಕರ್ತ ಆನೆಗಳ ಗುಂಪಿನ ಫೋಟೋ ತೆಗೆಯಲು ಯತ್ನಿಸಿದಾಗ ಆನೆಯೊಂದು ಆತನ ಮೇಲೆ ದಾಳಿ ಮಾಡಿದೆ. ತೀವ್ರವಾಗಿ ಗಾಯಗೊಂಡಿದ್ದ ಪತ್ರಕರ್ತನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಆತ ಮೃತಪಟ್ಟಿದ್ದಾನೆ.
ಕಳೆದ 2 ದಿನಗಳಿಂದ ರಾಜ್ಯದಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದ್ದು, ಪಟಾಕಿ ಮತ್ತು ಇತರೆ ಸಿಡಿ ಮದ್ದುಗಳ ಮೂಲಕ ಆನೆಗಳನ್ನು ಓಡಿಸುತ್ತಿದ್ದಾರೆ. ಈ ನಡುವೆ ಆನೆಗಳ ದಾಳಿಯಿಂದಾಗಿ ಈ ವರೆಗೂ 5 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಆನೆಗಳ ದಾಳಿಯಿಂದಾಗಿ ಉದ್ರಿಕ್ತಗೊಂಡಿರುವ ಸ್ಥಳೀಯ ಜನತೆ ಕಲ್ಲು ತೂರಾಟ ನಡೆಸಿದ್ದಾರೆ.