ಉತ್ತರಾಖಂಡಕ್ಕೆ ರಾಹುಲ್ ಗಾಂಧಿ ಭೇಟಿ
ಡೆಹ್ರಾಡೂನ್: ಪ್ರವಾಹ ಪೀಡಿತ ಉತ್ತರಾಖಂಡ ರಾಜ್ಯಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭೇಟಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸಲಿದ್ದಾರೆ.
ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್‌ನಲ್ಲಿ ಎಐಸಿಸಿ ಪ್ರಾರಂಭಿಸಿರುವ ನಿಯಂತ್ರಣ ಕೊಠಡಿಗೆ ಭೇಟಿ ನೀಡಿರುವ ರಾಹುಲ್ ಗಾಂಧಿ ಅವರು, ಸೈನಿಕರ ರಕ್ಷಣಾ ಕಾರ್ಯಾಚರಣೆಯ ಸಂಪೂರ್ಣ ವಿವರ ಪಡೆದಿದ್ದಾರೆ. ನಾಳೆ ಪ್ರವಾಹ ಪೀಡಿತ ಪ್ರದೇಶಗಳಿಗೆ ರಾಹುಲ್ ಗಾಂಧಿ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಂತೆಯೇ ರಾಹುಲ್ ಗಾಂಧಿ ತಮ್ಮೊಂದಿಗೆ ಪ್ರವಾಹಪೀಡಿತರಿಗಾಗಿ ಪರಿಹಾರ ಸಾಮಗ್ರಿಗಳನ್ನು ತಂದಿದ್ದು, ಟ್ರಕ್ ಮೂಲಕ ಅವುಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ರವಾನಿಸಲಾಗುತ್ತದೆ ಎಂದು ತಿಳಿದುಬಂದಿದೆ.
ರಾಹುಲ್ ಜೊತೆ ಬಂದಿರುವ ಈ ಟ್ರಕ್‌ನಲ್ಲಿ ಆಹಾರ ಪದಾರ್ಥಗಳು, ಔಷಧಿಗಳು, ಬಟ್ಟೆಗಳು ಮತ್ತು ಬೆಡ್‌ಶೀಟ್‌ಗಳು ಇದ್ದು, ಇವುಗಳನ್ನು ನಿರಾಶ್ರಿತರಿಗೆ ತಲುಪಿಸಲಾಗುತ್ತದೆ. ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರು ವೈಮಾನಿಕ ಸಮೀಕ್ಷೆ ನಡೆಸುವಾಗಲೇ ಅವರೊಂದಿಗೆ ರಾಹುಲ್ ಗಾಂಧಿ ಕೂಡ ಆಗಮಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಕಾರಣಾಂತರಗಳಿಂದ ರಾಹುಲ್ ಗಾಂಧಿ ವೈಮಾನಿಕ ಸಮೀಕ್ಷೆಯಿಂದ ದೂರ ಉಳಿದಿದ್ದರು.
ಪ್ರತಿಪಕ್ಷಗಳು ಇದನ್ನೇ ಕಾರಣವನ್ನಾಗಿಟ್ಟುಕೊಂಡು ರಾಹುಲ್ ಗಾಂಧಿ ವಿರುದ್ಧ ಟೀಕಾ ಪ್ರಹಾರ ಮಾಡಿದ್ದವು. ಇದೀಗ ರಾಹುಲ್ ಗಾಂಧಿ ಅವರು ಉತ್ತರಾಖಂಡ ರಾಜ್ಯಕ್ಕೆ ಭೇಟಿ ನೀಡಿದ್ದು ಪರಿಹಾರ ಕಾರ್ಯಾಚರಣೆ ವೀಕ್ಷಿಸಲಿದ್ದಾರೆ. ರಾಹುಲ್ ಗಾಂಧಿ ಅವರ ಕಾರ್ಯಾಚರಣೆ ವೀಕ್ಷಣೆಗೆ ರಾಜ್ಯದಲ್ಲಿ ಬೀಳುತ್ತಿರುವ ಮಳೆ ಅಡ್ಡಿಯಾಗಿದ್ದು, ನಾಳೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ನಿರಾಶ್ರಿತರನ್ನು ರಾಹುಲ್ ಭೇಟಿಯಾಗುವ ಸಾಧ್ಯತೆ ಇದೆ.