ನಾನು ಬಾಯಿ ಬಿಟ್ಟರೆ ಬಿಜೆಪಿ ಕರ್ಮಕಾಂಡ ಬಯಲು: ನಿತೀಶ್
ತಾವು ಬಾಯಿ ಬಿಟ್ಟರೆ ಬಿಜೆಪಿಯ ಕರ್ಮಕಾಂಡ ಬಯಲಾಗಿ ಹಲವು ನಾಯಕರು ಸಮಸ್ಯೆಗೀಡಾಗುತ್ತಾರೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಪಾಟ್ನಾ: ತಮ್ಮ ವಿರುದ್ಧ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆ ವಿರುದ್ಧ ತಿರುಗಿ ಬಿದ್ದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ತಾವು ಬಾಯಿ ಬಿಟ್ಟರೆ ಬಿಜೆಪಿಯ ಕರ್ಮಕಾಂಡ ಬಯಲಾಗಿ ಹಲವು ನಾಯಕರು ಸಮಸ್ಯೆಗೀಡಾಗುತ್ತಾರೆ ಎಂದು ಹೇಳಿದ್ದಾರೆ.
ರಾಜಧಾನಿ ಪಾಟ್ನಾದಲ್ಲಿ ಮಾತನಾಡಿದ ನಿತೀಶ್ ಕುಮಾರ್ ಅವರು, ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಮುಖವಾಗಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ಟೀಕೆಗಳನ್ನು ಗುರಿಯಾಗಿಸಿಕೊಂಡು ಮಾತನಾಡಿದ ನಿತೀಶ್ ಕುಮಾರ್ ಅವರು, ನಾನು ಬಾಯಿ ಬಿಟ್ಟರೆ ಬಿಜೆಪಿ ಪ್ರಮುಖ ನಾಯಕರು ಸೇರಿದಂತೆ ಹಲವು ಮುಖಂಡರು ಸಮಸ್ಯೆಗೀಡಾಗುತ್ತಾರೆ ಎಂದು ಹೇಳಿದರು.
ನಿನ್ನೆ ಪಾಟ್ನಾದಲ್ಲಿ ನಡೆದ ಬಿಜೆಪಿ ರ್ಯಾಲಿ ವೇಳೆ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅವರು, ಜೆಡಿ(ಯು) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ನಿತೀಶ್ ಕುಮಾರ್ ಅವರನ್ನು ಓಟ್ ಬ್ಯಾಂಕ್ ರಾಜಕಾರಣಿ ಎಂದು ಕರೆದಿದ್ದ ರಾಜನಾಥ್ ಸಿಂಗ್, ಮುಸ್ಲಿಂ ಮತದಾರರನ್ನು ಓಲೈಸಿಕೊಳ್ಳಲು ನಿತೀಶ್ ಎನ್ಡಿಎಯನ್ನು ತೊರೆದಿದ್ದಾರೆ ಎಂದು ಟೀಕಿಸಿದ್ದರು. 'ಕಳೆದ 17 ವರ್ಷಗಳಿಂದ ನಿತೀಶ್ ಕುಮಾರ್ ಅವರು ಎನ್ಡಿಎದ ಯಾವ ತತ್ವ ಸಿದ್ಧಾಂತಗಳನ್ನು ಒಪ್ಪಿ ಬೆಂಬಲ ನೀಡಿದ್ದರೋ ಇಂದು ಅವುಗಳನ್ನು ದ್ವೇಷಿಸುತ್ತಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷದೊಂದಿಗೆ ಎಂದಿಗೂ ಇಲ್ಲದ ತಮ್ಮ ಒಡನಾಟವನ್ನು ಬೆಳೆಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದರು.
ಅಲ್ಲದೆ ಇದೇ ಸಮಾರಂಭದಲ್ಲಿ ಮಾತನಾಡಿದ್ದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ಎನ್ಡಿಎ ವಕ್ತಾರರಾದ ನಂದಕಿಶೋರ್ ಯಾದವ್, ರಾಜ್ಯ ಬಿಜೆಪಿ ಅಧ್ಯಕ್ಷ ಮಂಗಲ್ ಪಾಂಡೆ ಅವರು ನಿತೀಶ್ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದರು.