ಹಿಟ್ ಅಂಡ್ ರನ್: ಸಲ್ಮಾನ್ ಜಾಮೀನು ಅರ್ಜಿ ವಜಾ
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಜಾಮೀನು ಅರ್ಜಿಯನ್ನು ಮುಂಬೈ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
ಮುಂಬೈ: ಹಿಟ್ ಅಂಡ್ ರನ್ ಪ್ರಕರಣದ ಆರೋಪಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಜಾಮೀನು ಅರ್ಜಿಯನ್ನು ಮುಂಬೈ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
1992 ಸೆಪ್ಟೆಂಬರ್ 28ರಂದು ಮುಂಬೈನ ಬಾಂದ್ರಾದಲ್ಲಿ ನಡೆದಿದ್ದ ಭೀಕರ ರಸ್ತೆ ಅಪಘಾತದ ಆರೋಪಿಯಾಗಿರುವ ಸಲ್ಮಾನ್ ಖಾನ್ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, ಒಂದು ತಿಂಗಳ ಅವಧಿಯಲ್ಲಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದೆ. ಅಲ್ಲದೆ ಪ್ರಕರಣವನ್ನು ಐಪಿಸಿ ಸೆಕ್ಷನ್ 302 (ಕೊಲೆ) ಬದಲಿಗೆ 304(2)(ನಿರ್ಲಕ್ಷ್ಯದಿಂದ ಸಾವು) ಪ್ರಕರಣಕ್ಕೆ ಬದಲಾಯಿಸಬೇಕು ಎಂಬ ಸಲ್ಮಾನ್ ಮನವಿಗೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ.
1992ರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಐಪಿಸಿ ಸೆಕ್ಷನ್ 302 ರ ಪ್ರಕಾರ ಸಲ್ಮಾನ್ ಖಾನ್ ಅಪರಾಧಿ ಎಂದು ಘೋಷಿಸಿತ್ತು. ಆದರೆ ನ್ಯಾಯಾಲಯದ ವಿರುದ್ಧ ಸೆಷನ್ಸ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದ ಸಲ್ಮಾನ್ ಖಾನ್ ಪರ ವಕೀಲ ಅಶೋಕ್ ಮುಂಡರಗಿ ಅವರು, ತಮ್ಮ ಕಕ್ಷಿದಾರ ನಿರಪರಾಧಿಯಾಗಿದ್ದು, ಕುಡಿದ ಅಮಲಿನಲ್ಲಿ ಕಾರು ಚಾಲನೆ ಮಾಡಿದ್ದರಿಂದ ಅವಘಡ ಸಂಭವಿಸಿದೆ ಎಂದು ವಾದಿಸಿದ್ದರು.
ಆದರೆ ಮುಂಡರಗಿ ವಾದವನ್ನು ಆಕ್ಷೇಪಿಸಿದ ಸರ್ಕಾರಿ ವಕೀಲರಾದ ಎಸ್.ಇರಾಂಡೆ ಅವರು, ಕಾರಿನಲ್ಲಿದ್ದ ಸಲ್ಮಾನ್ ಅವರ ಪೊಲೀಸ್ ಅಂಗರಕ್ಷಕನ ಎಚ್ಚರಿಕೆಯನ್ನು ಕಡೆಗಣಿಸಿ ಅತಿವೇಗವಾಗಿ ಕಾರುಚಾಲನೆ ಮಾಡಿದ್ದರಿಂದಲೇ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಅಂಗರಕ್ಷಕ ಸೇರಿದಂತೆ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಐಪಿಸಿ ಸೆಕ್ಷನ್ 302ರ ಪ್ರಕಾರ ವಿಚಾರಣೆ ನಡೆಸುವುದರಲ್ಲಿ ತಪ್ಪಿಲ್ಲ ಎಂದು ತಮ್ಮ ವಾದ ಮಂಡಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.
ಪ್ರಕರಣಕ್ಕೆ ಸಂಭಂದಿಸಿದಂತೆ ನ್ಯಾಯಾಲಯ ಇದುವರೆವಿಗೂ 17 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿದ್ದು, ಪ್ರಕರಣದಲ್ಲಿ ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾದರೆ ಅವರಿಗೆ ಕನಿಷ್ಟ 10 ವರ್ಷ ಜೈಲು ಶಿಕ್ಷೆಯಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.