ವಿದ್ಯಾರ್ಥಿ ನಿಗೂಢ ಸಾವು: ಕಾಶ್ಮೀರ ಉದ್ವಿಗ್ನ
ಕಾಶ್ಮೀರ ಮೂಲದ ವಿದ್ಯಾರ್ಥಿ ಹೈದರಾಬಾದಿನಲ್ಲಿ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರ ಉದ್ವಿಗ್ನಗೊಂಡಿದೆ.
ನವದೆಹಲಿ: ಕಾಶ್ಮೀರ ಮೂಲದ ವಿದ್ಯಾರ್ಥಿ ಹೈದರಾಬಾದಿನಲ್ಲಿ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರ ಉದ್ವಿಗ್ನಗೊಂಡಿದೆ.
ಕಾಶ್ಮೀರದ ಪುಲ್ವಾಮ ಗ್ರಾಮದ ನಿವಾಸಿಯಾಗಿದ್ದ ಮುದಾಸಿರ್, ಹೈದರಾಬಾದಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಹೈದರಾಬಾದಿನ ಪಿಜಿಯಲ್ಲಿ ತಂಗಿದ್ದ ಮುದಾಸಿರ್ ಇಂದು ಬೆಳ್ಳಿಗ್ಗೆ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಹೈದರಾಬಾದ್ ಪೊಲೀಸರು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡುಬಂದಿದ್ದರೂ, ಕೊಲೆಯಾಗಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ಈ ನಡುವೆ ಮುದಾಸಿರ್ ಸಾವಿನ ವಿಷಯ ಹಬ್ಬುತ್ತಿದ್ದಂತೆ ಮುದಾಸಿರ್ ಗ್ರಾಮ ಸೇರಿದಂತೆ ಇಡೀ ಕಾಶ್ಮೀರ ಉದ್ವಿಗ್ನಗೊಂಡಿದೆ. ಘಟನೆ ಕುರಿತಂತೆ ಎರಡು ಗುಂಪಿನ ನಡುವೆ ಸಂಘರ್ಷ ಏರ್ಪಟ್ಟಿದೆ. ಸಂಘರ್ಷ ಇದೀಗ ಇಡೀ ಜಿಲ್ಲೆಗೆ ವ್ಯಾಪಿಸಿದ್ದು, ಜಿಲ್ಲೆಯಲ್ಲಿ ಅಘೋಷಿತ ಬಂದ್ ನಿರ್ಮಾಣವಾಗಿದೆ.
ಸ್ಥಳಕ್ಕೆ ಸಿಆರ್ಪಿಎಫ್ ಯೋಧರು ಸೇರಿದಂತೆ ಸ್ಥಳೀಯ ಪೊಲೀಸರು ದೌಡಾಯಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಲಘ ಲಾಠಿ ಪ್ರಹಾರ ನಡೆಸಿದ್ದಾರೆ. ಅಲ್ಲದೆ ಮುದಾಸಿರ್ ಸಾವಿನ ಕುರಿತು ಕಾಶ್ಮೀರ ಪೊಲೀಸರು ಹೈದರಾಬಾದ್ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.