ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕಾಗಿ ಬಿಎಸ್ಆರ್ಗೆ ಬಂದೆ : ನಟಿ ಪೂಜಾಗಾಂಧಿ
ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕಾಗಿ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ ಎಂದು ನಟಿ ಪೂಜಾಗಾಂಧಿ ಹೇಳಿದರು.
ಬೆಂಗಳೂರು: ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕಾಗಿ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ ಎಂದು ನಟಿ ಪೂಜಾಗಾಂಧಿ ಹೇಳಿದರು.
ಬಿಎಸ್ಆರ್ ಕಾಂಗ್ರೆಸ್ ಸಂಸ್ಥಾಪಕ ಬಿ ಶ್ರೀರಾಮುಲ ಅವರ ನೇತೃತ್ವದಲ್ಲಿ ನಟಿ ಪೂಜಾಗಾಂಧಿ ಅವರು ಅಧಿಕೃತವಾಗಿ ಇಂದು ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕೆಜೆಪಿಯಲ್ಲಿ ತನಗೆ ಯಾವುದೇ ಬೆಲೆಯಿಲ್ಲ. ಕಳೆದ 2 ವಾರಗಳಿಂದ ಪಕ್ಷದ ಯಾವೊಂದು ಸಭೆ ಸಮಾರಂಭಗಳಿಗೂ ನನ್ನನ್ನು ಆಹ್ವಾನಿಸಿರಲಿಲ್ಲ. ಕನಿಷ್ಟ ಪಕ್ಷ ಸಭೆಗಳ ಕುರಿತು ಮಾಹಿತಿಯನ್ನೂ ನೀಡುತ್ತಿರಲಿಲ್ಲ. ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ಕೆಜೆಪಿಯಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕಾಗಿ ನಾನು ಪಕ್ಷವನ್ನು ತೊರೆಯಬೇಕಾಯಿತು ಎಂದು ನಟಿ ಪೂಜಾಗಾಂಧಿ ತಿಳಿಸಿದರು.
ನಟಿ ರಕ್ಷಿತಾ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಬಿಡುವ ಕುರಿತು ವರದಿಗಾರರು ಪ್ರಶ್ನಿಸಿದಾಗ, "ಈ ಪ್ರಶ್ನೆಯನ್ನು ಅವರನ್ನೇ ಕೇಳಿ' ಎಂದು ಹೇಳುವ ಮೂಲಕ ಪೂಜಾ ನುಣುಚಿಕೊಂಡರು.
ಸಿನಿಮಾ ರಂಗದಲ್ಲಿರುವಾಗಲೇ ರಾಜಕೀಯಕ್ಕೆ ಧುಮುಕಿದ್ದ ನಟಿ ಪೂಜಾಗಾಂಧಿ, ನೋಡ ನೋಡುತ್ತಿದ್ದಂತೆ ಸತತ ಮೂರು ಪಕ್ಷಗಳನ್ನು ಬದಲಿಸಿಬಿಟ್ಟರು. ಆರಂಭದಲ್ಲಿ ಅಂದರೆ 2012 ಜನವರಿ 18 ರಂದು ಜೆಡಿಎಸ್ ಪಕ್ಷದ ತೆನೆ ಹೊತ್ತಿದ್ದ ನಟಿ ಪೂಜಾ, ನಂತರ ಡಿಸೆಂಬರ್ 7 2012 ರಂದು ಯಡಿಯೂರಪ್ಪನವರ ನೇತೃತ್ವದ ಕರ್ನಾಟಕ ಜನತಾ ಪಕ್ಷವನ್ನು ಸೇರಿದ್ದರು. ಪಕ್ಷದಲ್ಲಿ ಗುರುತಿಸಿಕೊಳ್ಳುವ ಹೊತ್ತಿಗೆ ಮತ್ತೆ ಅವರು ಪಕ್ಷವನ್ನು ಬದಲಿಸಿದ್ದಾರೆ.
ಕೆಜೆಪಿ ತೊರೆದಿರುವ ನಟಿ ಪೂಜಾ, ಇದೀಗ ಶ್ರೀರಾಮುಲು ಅವರ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಜಿಗಿದಿದ್ದಾರೆ. ಮಾರ್ಚ್ 7 ರಂದು ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿ ಪೂಜಾ ತಿಳಿಸಿದ್ದಾರೆ.
ಇತ್ತೀಚೆಗೆ ನಟಿ ಶ್ರುತಿ ಕೂಡ ಬಿಜೆಪಿ ತೊರೆದು ಕೆಜೆಪಿ ಸೇರ್ಪಡೆಗೊಂಡಿದ್ದರು. ನಟಿ ಮಣಿಯರ ಪಕ್ಷ ಬದಲಾವಣೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿವೆ.