ಸೈನಿಕರ ಶಿರಚ್ಛೇದ: ಕೇಂದ್ರಕ್ಕೆ 'ಸುಪ್ರೀಂ' ನೋಟಿಸ್
ಭಾರತೀಯ ಸೈನಿಕರ ಶಿರಚ್ಛೇದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಮಾಡಿದೆ.
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿ ನಡೆದ ಭಾರತೀಯ ಸೈನಿಕರ ಶಿರಚ್ಛೇದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಮಾಡಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಸೈನಿಕರ ದುರ್ವರ್ತನೆ ಕುರಿತು ನ್ಯಾಯಾಲಯದಲ್ಲಿ ದಾಖಲಾಗಿದ್ದ ಪಿಐಎಲ್ ಅನ್ನು ನ್ಯಾ.ಪಿ ಸದಾಶಿವಂ ಮತ್ತು ಜೆಎಸ್ ಖೆಹರ್ ಅವರ ನೇತೃತ್ವದ ನ್ಯಾಯಪೀಠ ಇಂದು ವಿಚಾರಣೆಗೆ ತೆಗೆದುಕೊಂಡಿತು.
'ಇದೊಂದು ಘೋರ ಮತ್ತು ಅಮಾನವೀಯ ಕೃತ್ಯ. ಗಡಿಯಲ್ಲಿ ಪಾಕ್ ಸೈನಿಕರ ದುರ್ವರ್ತನೆಯನ್ನು ನ್ಯಾಯಾಲಯ ಕಟು ಶಬ್ದಗಳಿಂದ ಖಂಡಿಸುತ್ತದೆ. ಭಾರತೀಯ ಸೈನಿಕರನ್ನು ಅಪಹರಿಸಿ ಅವರ ರುಂಡವನ್ನು ಬೇರ್ಪಡಿಸಿ ಹತ್ಯೆಗೈದಿರುವುದು ಅಕ್ಷಮ್ಯ ಅಪರಾಧ. ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು' ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರಣ ಸಂಬಂಧ ನ್ಯಾಯಪೀಠವು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದಲ್ಲಿ ದೂರು ದಾಖಲಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.