ಪಾಕ್ ಪ್ರಧಾನಿ ಭೇಟಿ ಹಿನ್ನಲೆ ಅಜ್ಮೀರ್ ಭದ್ರತೆ ಹೆಚ್ಚಳ
ಪಾಕ್ ಪ್ರಧಾನಿ ಅಶ್ರಫ್ ಅವರು ಶುಕ್ರವಾರ ಭೇಟಿ ನೀಡುವ ಹಿನ್ನಲೆಯಲ್ಲಿ ಜೈಪುರದ ಅಜ್ಮೀರ್ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಜೈಪುರ: ಪಾಕಿಸ್ತಾನ ಪ್ರಧಾನಿ ರಾಜಾ ಫರ್ವೇಜ್ ಅಶ್ರಫ್ ಅವರು ಶುಕ್ರವಾರ ಜೈಪುರಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ ಜೈಪುರದ ಅಜ್ಮೀರ್ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಪಾಕಿಸ್ತಾನ ಪ್ರಧಾನಿಗಳು ಭೇಟಿ ನೀಡುವ ಅಜ್ಮೀರ್ನ ಖ್ಯಾತ ಖ್ವಾಜಾ ಮೋಯಿನುದ್ದೀನ್ ಚಿಸ್ತಿ ಮಸೀದಿಗೆ ಪಾಕ್ ರಕ್ಷಣಾ ಸಿಬ್ಬಂದಿಗಳು ಈಗಾಗಲೇ ಭೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಅವರಿಗೆ ಸ್ಥಳೀಯ ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ.
ಅಶ್ರಫ್ ಅವರು ಭೇಟಿ ನೀಡುವ ಮಸೀದಿಯ ಸುತ್ತಮುತ್ತಲ ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಪೊಲೀಸರು ಸುತ್ತುವರಿದಿದ್ದು, ನಾಲ್ಕು ಹಂತಗಳಲ್ಲಿ ಭದ್ರತೆಯನ್ನು ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಎಚ್ಚರಿಕೆ ವಹಿಸಿರುವ ಸ್ಥಳೀಯ ಪೊಲೀಸರು ಮಸೀದಿಗೆ ಭೇಟಿ ನೀಡುವವರನ್ನು ತಪಾಸಣೆಗೊಳಪಡಿಸುತ್ತಿದ್ದಾರೆ.
ಅಲ್ಲದೆ ಅಶ್ರಫ್ ಅವರು ಮಸೀದಿಗೆ ಭೇಟಿ ನೀಡಿ ವಾಪಸಾಗುವವರೆಗೂ ಸುತ್ತಮುತ್ತಲಿನ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಸಂಜೆ ಪಾಕಿಸ್ತಾನದಿಂದ ಜೈಪುರಕ್ಕೆ ಆಗಮಿಸುವ ರಾಜಾ ಫರ್ವೇಜ್ ಅಶ್ರಫ್ ಅವರು, ಇಂದು ರಾತ್ರಿ ಜೈಪುರದ ಖಾಸಗಿ ಹೋಟೆಲ್ನಲ್ಲಿ ತಂಗಿದ್ದು, ನಾಳೆ ಮುಂಜಾನೆ ಮಸೀದಿಗೆ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.