ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬೇಲೆಕೇರಿ ಅದಿರು ನಾಪತ್ತೆ: 14ರವರೆಗೆ ರೆಡ್ಡಿ ಸಿಬಿಐ ವಶಕ್ಕೆ

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಜನಾರ್ದನ ರೆಡ್ಡಿ ಅವರನ್ನು ಮಾ. 14 ರವರೆಗೆ ಸಿಬಿಐ ವಶಕ್ಕೆ ನೀಡಲಾಗಿದೆ.

Srinivasa Murthy VN
Updated On : 8 Mar 2013, 6:31 am

ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಮಾರ್ಚ್ 14 ರವರೆಗೆ ಸಿಬಿಐ ವಶಕ್ಕೆ ನೀಡಲಾಗಿದೆ.

ಅಕ್ರಮ ಗಣಿಗಾರಿಕೆ ಮತ್ತು ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ಉರುಳು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಲವಾಗಿಯೇ ಸುತ್ತಿಕೊಂಡಿದೆ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣವನ್ನು ಇಂದು ವಿಚಾರಣೆಗೆ ತೆಗೆದುಕೊಂಡ ಸಿಬಿಐ ವಿಶೇಷ ನ್ಯಾಯಾಲಯ, ಜನಾರ್ದನ ರೆಡ್ಡಿ ಮತ್ತು ಅವರ ಆಪ್ತರನ್ನು ಐದು ದಿನಗಳ ಕಾಲ ಸಿಬಿಐ ಅಧಿಕಾರಿಗಳ ವಶಕ್ಕೆ ಒಪ್ಪಿಸಿದೆ.

ಬಳ್ಳಾರಿಯ ಅಮಾನತುಗೊಂಡ ಅರಣ್ಯಾಧಿಕಾರಿ ಮುತ್ತಯ್ಯ ಸೇರಿದಂತೆ, ರೆಡ್ಡಿ ಆಪ್ತರಾದ ಸ್ವಸ್ತಿಕ್ ನಾಗರಾಜು, ಖಾರದಪುಡಿ ಮಹೇಶ್, ಜನಾರ್ಧನ ರೆಡ್ಡಿ ಅವರ ಆಪ್ತ ಸಹಾಯಕ ಅಲಿಖಾನ್ ಅವರನ್ನು ಐದು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಲಾಗಿದೆ.

ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರೆಡ್ಡಿ ಪರ ವಕೀಲ ಸಿ.ಹೆಚ್.ಹನುಮಂತರಾಯ ಅವರು, 'ಸಿಬಿಐ ಅಧಿಕಾರಿಗಳು ರೆಡ್ಡಿಯನ್ನು 14 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಆದರೆ ತಮ್ಮ ವಾದವನ್ನು ಮನ್ನಿಸಿ ಸಿಬಿಐ ವಿಶೇಷ ನ್ಯಾಯಾಲಯ ರೆಡ್ಡಿ ಅವರನ್ನು 5 ದಿನಗಳಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ.  ಹಗಲಿನಲ್ಲಿ ಮಾತ್ರ ಅವರನ್ನು ವಿಚಾರಣೆಗೊಳಪಡಿಸಲು ನ್ಯಾಯಾಲಯ ಆದೇಶಿಸಿದೆ' ಎಂದರು.

'ಜನಾರ್ದನ ರೆಡ್ಡಿ ಅವರು ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿಯೇ ಉಳಿಯಲಿದ್ದಾರೆ. ವಿಚಾರಣೆ ವೇಳೆ ಸಿಬಿಐ ಅಧಿಕಾರಿಗಳು ಅವರನ್ನು ತಮ್ಮ ಕಚೇರಿಗೆ ಕರೆದೊಯ್ಯಬಹುದು. ವಿಚಾರಣೆ ಸಮಯದಲ್ಲಿ ರೆಡ್ಡಿ ಅವರೊಂದಿಗೆ ವಕೀಲರೊಬ್ಬರು ಹಾಜರಿರಲು ನ್ಯಾಯಾಲಯ ಅನುಮತಿ ನೀಡಿದೆ' ಎಂದು ಹನುಮಂತರಾಯ ಅವರು ಸ್ಫಷ್ಟಪಡಿಸಿದರು.

ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದಿನ ಚಂಚಲಗೂಡ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿರುವ ಜನಾರ್ದನ ರೆಡ್ಡಿ ಅವರನ್ನು, ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂದ ವಿಚಾರಣೆಗಾಗಿ ಕಳೆದ ರಾತ್ರಿ ಬೆಂಗಳೂರಿಗೆ ಕರೆತರಲಾಗಿತ್ತು. ಬೆಂಗಳೂರಿಗೆ ಬಂದ ಅವರನ್ನು ನೋಡಲು ಇಂದು ಬೆಳ್ಳಗ್ಗೆ ರೆಡ್ಡಿ ಆಪ್ತಸ್ನೇಹಿತರಾದ ಶ್ರೀರಾಮುಲು, ಬಳ್ಳಾರಿ ಸಂಸದೆ ಜೆ.ಶಾಂತಾ, ರೆಡ್ಡಿ ಪತ್ನಿ ಅರುಣಾ ಮತ್ತು ಅವರ ಮಕ್ಕಳು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದರು. ಆದರೆ ಜೈಲಿನ ಅಧಿಕಾರಿಗಳು ಅವರ ಭೇಟಿಗೆ ಅವಕಾಶ ನಿರಾಕರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement