ನಾನು ಮತ್ತು ವಿಜೇಂದರ್ ಡ್ರಗ್ಸ್ ಸೇವಿಸಿದ್ದೆವು: ರಾಮ್‌ಸಿಂಗ್
ಮಾದಕ ವಸ್ತು ಸೇವಿಸಿದ್ದಾಗಿ ಹೇಳಿಕೆ ನೀಡಿದ ಬಾಕ್ಸರ್ ರಾಮ್‌ಸಿಂಗ್; ಬಾಕ್ಸರ್‌ನನ್ನು ಉಚ್ಛಾಟಿಸಿದ ಎನ್‌ಐಎಸ್
ಮೊಹಾಲಿ: ನಾನು ಮತ್ತು ವಿಜೇಂದರ್ ಸಿಂಗ್ ಸಣ್ಣ ಪ್ರಮಾಣದಲ್ಲಿ ಹೆರಾಯಿನ್ ಸೇವಿಸಿದ್ದೆವು ಎಂದು ಬಾಕ್ಸರ್ ರಾಮ್ ಸಿಂಗ್ ಹೇಳಿದ್ದಾರೆ.
ಅಪಾರ ಪ್ರಮಾಣದ ಮಾದಕ ವಸ್ತು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆ ಎದುರಿಸುತ್ತಿರುವ ಬಾಕ್ಸರ್ ರಾಮ್ ಸಿಂಗ್, ಇಂದು ಪೊಲೀಸರ ಮುಂದೆ ತಾವು ಮತ್ತು ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಅವರು 2012ರ ಅಂತ್ಯದಲ್ಲಿ ಅಲ್ಪ ಪ್ರಮಾಣದ ಹೆರಾಯಿನ್ ಸೇವಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಆದರೆ ರಾಮ್ ಸಿಂಗ್ ಹೇಳಿಕೆಯನ್ನು ತಿರಸ್ಕರಿಸಿರುವ ವಿಜೇಂದರ್ ಸಿಂಗ್, ರಾಮ್ ಸಿಂಗ್ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಮಾದಕ ವಸ್ತು ತಂದಿದ್ದಾನೆ ಎಂದು ಹೇಳಲಾಗುತ್ತಿರುವ ವ್ಯಕ್ತಿಗೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಹಿಂದೆ ಆತ ನನ್ನನ್ನು ಭೇಟಿ ಮಾಡಿರಬಹುದು. ಅದು ನನಗೆ ನೆನಪಿಲ್ಲ. ವೈಯುಕ್ತಿಕವಾಗಿ ಆತ ನನಗೆ ಗೊತ್ತಿಲ್ಲ ಹೆರಾಯಿನ್ ಪತ್ತೆಯಾದ ಸ್ಥಳದಲ್ಲಿ ನನ್ನ ಪತ್ನಿಯ ಕಾರು ಇದ್ದುದ್ದಕ್ಕೆ ಯಾವುದೇ ಅರ್ಥಕಲ್ಪಿಸುವುದು ಬೇಡ. ಇದೊಂದು ಕಾಕತಾಳೀಯವಷ್ಟೇ. ಘಟನೆಗೆ ಸಂಬಂಧಿಸಿದಂತೆ ನಾನು ಪೊಲೀಸರಿಗೆ ಸಂಪೂರ್ಣ ಸಹಕಾರ ಒದಗಿಸುತ್ತೇನೆ ಎಂದು ವಿಜೇಂದರ್ ಸ್ಪಷ್ಟಪಡಿಸಿದ್ದಾರೆ.
ಮೊಹಾಲಿಯ ಜೀರಕ್‌ಪುರದ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾದ ಅಪಾರ ಪ್ರಮಾಣದ ಹೆರಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೊಹಾಲಿ ಪೊಲೀಸರು ಇಬ್ಬರು ಬಾಕ್ಸರ್‌ಗಳಾದ ವಿಜೇಂದರ್ ಸಿಂಗ್ ಮತ್ತು ರಾಮ್‌ಸಿಂಗ್ ಅವರ ವಿಚಾರಣೆಯನ್ನು ಮುಂದುವರೆಸಿದ್ದಾರೆ.
ಬಾಕ್ಸರ್‌ನನ್ನು ಉಚ್ಛಾಟಿಸಿದ ಎನ್‌ಐಎಸ್
ಈ ನಡುವೆ ಮಾದಕ ವಸ್ತು ಪತ್ತೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿರುವ ಬಾಕ್ಸರ್ ರಾಮ್ ಸಿಂಗ್ ಅವರನ್ನು ರಾಷ್ಟ್ರೀಯ ಕ್ರೀಡಾ ಸಂಸ್ಥೆ (ಎನ್‌ಐಎಸ್
) ಉಚ್ಛಾಟಿಸಿದೆ.
ಪಂಜಾಬ್‌ನ ಜೀರಕ್‌ಪುರದಲ್ಲಿರುವ ವಿಜೇಂದರ್ ಸಿಂಗ್ ಅವರಿಗೆ ಸೇರಿದ ಫ್ಲಾಟ್ ಬಳಿ ಸುಮಾರು 130 ಕೋಟಿ ರು. ಮೌಲ್ಯದ 26 ಕೆಜಿ ಹೆರಾಯಿನ್ ಪತ್ತೆಯಾಗಿತ್ತು. ಸ್ಥಳದಲ್ಲಿಯೇ ಇದ್ದ ವಿಜೇಂದರ್ ಪತ್ನಿ ಅರ್ಚನಾ ಸಿಂಗ್ ಅವರ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಒಟ್ಟಾರೆ ಮಾದಕ ವಸ್ತು ಪತ್ತೆ ಪ್ರಕರಣ ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಅವರ ಜೀವನಕ್ಕೆ ಒಂದು ಕಪ್ಪು ಚುಕ್ಕೆಯಾಗಿ ಪರಿಣಮಿಸುತ್ತಿದೆ. ಪಾಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿದ್ದ ವಿಜೇಂದರ್ ಸಿಂಗ್ ಮತ್ತು ರಾಮ್ ಸಿಂಗ್ ಹಲವು ವರ್ಷಗಳಿಂದ ಒಂದೇ ಕೊಠಡಿಯಲ್ಲಿ ವಾಸವಿದ್ದರು. ಸ್ವತಃ ಅವರ ಸಹ ಆಟಗಾರನೇ ಅವರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದರಿಂದ ವಿಜೇಂದರ್ ಅವರನ್ನು ಅನುಮಾನದಿಂದ ನೋಡುವಂತೆ ಮಾಡಿದೆ.