"ಭಾರತ ಮೊದಲು": ವಿಡಿಯಾ ಕಾನ್ಫರೆನ್ಸ್ ನಲ್ಲಿ ಮೋದಿ ಹೇಳಿಕೆ
ತಮಗೆ ವೀಸಾ ನಿರಾಕರಿಸಿರುವ ಅಮೇರಿಕಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ವಿಡಿಯೋ ಕಾನ್ಫರೆನ್ಸ್ ಮೂಲಕ ದಿಟ್ಟ ಉತ್ತರ ನೀಡಿದ್ದಾರೆ.
ಅಹ್ಮದಾಬಾದ್: ತಮಗೆ ವೀಸಾ ನಿರಾಕರಿಸಿರುವ ಅಮೇರಿಕಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ವಿಡಿಯೋ ಕಾನ್ಫರೆನ್ಸ್ ಮೂಲಕ ದಿಟ್ಟ ಉತ್ತರ ನೀಡಿದ್ದಾರೆ.
ಭಾರತ ಮತ್ತು ಅಮೇರಿಕ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಜಾತ್ಯಾತೀತತೆ ಎಂದರೆ "ಮೊದಲು ಭಾರತ" ಎಂದು ಉತ್ತರಿಸಿದರು. 2002ರ ಗೋದ್ರಾ ಹತ್ಯಾಕಾಂಡದ ಕುರಿತು ಇಂದಿನ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮೋದಿ ಹಲವು ಪ್ರಶ್ನೆಗಳನ್ನು ಎದುರಿಸಿದರು. ಆದರೆ ಮುಗಿದು ಹೋಗಿರುವ ವಿವಾದಗಳು ಕುರಿತು ತಾವು ಮಾತನಾಡುವುದಿಲ್ಲ ಎಂದು ಮೋದಿ 2002 ಗೋದ್ರಾ ಹತ್ಯಾಕಾಂಡದ ಕುರಿತು ಮಾತನಾಡಲು ನಿರಾಕರಿಸಿದರು.
ತಮ್ಮ ಒಂದು ತಾಸಿಗೂ ಅಧಿಕ ಸಮಯದ ಭಾಷಣದಲ್ಲಿ ನರೇಂದ್ರ ಮೋದಿ, ಜಾತ್ಯಾತೀತಗೆ "ಭಾರತ ಮೊದಲು" ಎನ್ನುವ ತಮ್ಮದೇ ಆದ ನಿರೂಪಣೆ ನೀಡಿದರು. ತಮ್ಮ ಭಾಷಣದುದ್ದಕ್ಕೂ "ಗುಜರಾತ್ ಅಭಿವೃದ್ದಿ ಮತ್ತು ಭವಿಷ್ಯ"ದ ಭಾರತದ ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.
"ಅಭಿವೃದ್ದಿಯಲ್ಲಿ ಇಡೀ ದೇಶಕ್ಕೆ ಗುಜರಾತ್ ಮಾದರಿ. ಅಭಿವೃದ್ಧಿ ಸಾಧನೆಗೆ ಶ್ರಮಿಸಿದ ಗುಜರಾತ್ ಜನತೆಗೆ ನನ್ನ ವಂದನೆ. ಭಾರತ ಆರ್ಥಿಕತೆ ಬಲಿಷ್ಟವಾಗಿದೆ. ಅಮೆರಿಕದ ಆರ್ಥಿಕತೆ ಭಾರತದ ಆರ್ಥಿಕತೆಯ ಮೇಲೆ ಅವಲಂಬಿತವಾಗಿದೆ. 19ನೇ ಶತಮಾನದಲ್ಲಿ ಯೂರಪ್ ಜಯಿಸಿತ್ತು. 21ನೇ ಶತಮಾನದಲ್ಲಿ ಜಯ ಭಾರತಕ್ಕೆ" ಎಂದು ಮೋದಿ ಹೇಳಿದರು.
"ಜಾತ್ಯಾತೀತತೆ ಬಗ್ಗೆ ಯಾರಾದರೂ ನನ್ನು ಕೇಳಿದರೆ ನಾನು "ಭಾರತ ಮೊದಲು" ಎನ್ನುತ್ತೇನೆ. ಭಾರತೀಯ ಪ್ರಜೆಗಳಿಗೆ ಮೊದಲ ಆದ್ಯತೆ ಲಭಿಸಬೇಕು. ಯಾರು ಭಾರತ ದೇಶವನ್ನು ಪ್ರೀತಿಸುತ್ತಾರೆಯೋ ಅವರು ನನ್ನ ವ್ಯಾಖ್ಯೆಯನ್ನು ಒಪ್ಪುತ್ತಾರೆ. ಭಾರತ ದೇಶದ ಅಭಿವೃದ್ಧಿ ಮತ್ತು ಯೋಗಕ್ಷೇವು ನಮ್ಮ ಮೊದಲ ಆಧ್ಯತೆಯಾಗಬೇಕು. ಇದು ಕೇವಲ ಜಾತ್ಯಾತೀತತೆಯಿಂದ ಮಾತ್ರ ಸಾಧ್ಯ. ಭಾರತದಲ್ಲಿ ಪ್ರಸ್ತುತ ಶೇ. 65 ರಷ್ಟು ಯುವಕರಿದ್ದಾರೆ. ಭಾರತದ ಏಳಿಗೆಯಲ್ಲಿ ಯುವಶಕ್ತಿ ಮಹತ್ವದ ಪಾತ್ರ ನಿಭಾಯಿಸಲಿದೆ." ಎಂದು ಮೋದಿ ಹೇಳಿದರು.
ಕಳೆದ ವಾರ ವಾರ್ಟನ್ ಇಂಡಿಯಾ ಎಕನಾಮಿಕ್ ಫೋರಮ್ ತನ್ನ ಕಾರ್ಯಕ್ರಮದ ಭಾಷಣಕಾರರ ಪಟ್ಟಿಯಿಂದ ಮೋದಿ ಅವರ ಹೆಸರನ್ನು ಕಿತ್ತುಹಾಕಿದ ನಂತರ ಮೊದಲ ಬಾರಿಗೆ ನರೇಂದ್ರಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಮೋದಿ ಅವರ ಈ ಭಾಷಣ ಏಕಕಾಲದಲ್ಲಿ ಭಾರತ ಸೇರಿದಂತೆ ಅಮೇರಿಕದ ನ್ಯೂಜೆರ್ಸಿ ಮತ್ತು ಚಿಕಾಗೋದಲ್ಲಿ ಪ್ರಸಾರವಾಯಿತು.