ಸೆಹ್ವಾಗ್ರನ್ನು ಕೈಬಿಡಲು ಧೋನಿ ಕಾರಣ: ಗಂಗೂಲಿ
ಭಾರತ ಟೆಸ್ಟ್ ತಂಡದಿಂದ ಸೆಹ್ವಾಗ್ ರನ್ನು ಕೈ ಬಿಡಲು ನಾಯಕ ಧೋನಿ ಕಾರಣ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ಕೊಲ್ಕತಾ: ಭಾರತ ಟೆಸ್ಟ್ ತಂಡದಿಂದ ಸೆಹ್ವಾಗ್ ರನ್ನು ಕೈ ಬಿಡಲು ನಾಯಕ ಧೋನಿ ಕಾರಣ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ಕೊಲ್ಕತಾದಲ್ಲಿ ಮಾತನಾಡಿದ ಸೌರವ್ ಗಂಗೂಲಿ, ಟೆಸ್ಟ್ ತಂಡದಿಂದ ಸೆಹ್ವಾಗ್ ರನ್ನು ಕೈ ಬಿಟ್ಟಿರುವುದು ಸರಿಯಲ್ಲ. ಸೆಹ್ವಾಗ್ ಒಬ್ಬ ಪ್ರತಿಭಾನ್ವಿತ ಆಟಗಾರ. ಪ್ರಸ್ತುತ ಅವರು ಕಳಪೆ ಫಾರ್ಮ್ ನಲ್ಲಿರಬಹುದು. ಆದರೆ ಪಂದ್ಯದ ಯಾವುದೇ ಸಂದರ್ಭದಲ್ಲಿ ತಿರುಗಿ ಬೀಳುವ ಸಾಮರ್ಥ್ಯ ಅವರಲ್ಲಿದೆ ಎಂದು ಹೇಳಿದರು.
"ಸೆಹ್ವಾಗ್ ಅವರನ್ನು ತಂಡದಿಂದ ಕೈ ಬಿಡುವಲ್ಲಿ ಧೋನಿ ಪಾತ್ರವಿಲ್ಲವೆನ್ನುವುದು ಸತ್ಯಕ್ಕೆ ದೂರವಾದ ಮಾತು. ಏಕೆಂದರೆ ಯಾವುದೇ ರೀತಿಯ ಕ್ರಿಕೆಟ್ ಮಾದರಿಗೆ ತಂಡವನ್ನು ಆಯ್ಕೆ ಮಾಡುವಾಗ ಆಯ್ಕೆ ಮಂಡಳಿ ತಂಡದ ನಾಯಕನೊಂದಿಗೆ ಚರ್ಚಿಸುತ್ತದೆ. ಅಲ್ಲದೆ ನಾಯಕನಾದವನು ಆಯ್ಕೆ ಮಂಡಳಿಯಿಂದ ತನಗೆ ಬೇಕಾದ ಆಟಗಾರರನ್ನು ಪಡೆಯುವ ಅಥವಾ ಉಳಿಸಿಕೊಳ್ಳುವ ಅವಕಾಶವಿರುತ್ತದೆ".
"ಹೀಗಾಗಿ ನಾಯಕ ಧೋನಿ ಅವರ ವಿರೋಧದ ನಡುವೆ ಸೆಹ್ವಾಗ್ ಅವರನ್ನು ಕೈ ಬಿಡಲಾಗಿದೆ ಎನ್ನುವುದನ್ನು ನಾನು ಒಪ್ಪಲಾರೆ. ಸೆಹ್ವಾಗ್ ಅವರನ್ನು ಕೈ ಬಿಡುವಲ್ಲಿ ಧೋನಿ ಕೂಡ ಒಂದು ರೀತಿಯ ಕಾರಣ" ಎಂದು ಗಂಗೂಲಿ ಹೇಳಿದರು.
ಭಾರತ ಕ್ರಿಕೆಟ್ ತಂಡದ ನಾಯಕತ್ವಕ್ಕಾಗಿ ಧೋನಿ ಮತ್ತು ಸೆಹ್ವಾಗ್ ಅವರ ನಡುವೆ ಏರ್ಪಟ್ಟಿದ್ದ ವಿರಸ ಮಾಧ್ಯಮಗಳಲ್ಲಿಯೂ ವರದಿಯಾಗಿತ್ತು. ಅಲ್ಲದೆ ಸ್ವತಃ ಈ ಇಬ್ಬರು ಆಟಗಾರರು ತಮಗೆ ಅವಕಾಶ ಸಿಕ್ಕಾಗಲೆಲ್ಲಾ ಮಾಧ್ಯಮಗಳಲ್ಲಿ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಿದ್ದರು. ಆದರೆ ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಮಾತ್ರ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ತೇಪೆ ಹಚ್ಚುತ್ತಿದ್ದರು. ಇದೀಗ ಮಾಜಿ ನಾಯಕ ಗಂಗೂಲಿ ಅವರ ಹೇಳಿಕೆಯಿಂದ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ.