ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನೌಕಾಪಡೆ ಸಿಬ್ಬಂದಿ ಭಾರತಕ್ಕೆ ಬರುವುದಿಲ್ಲ: ಇಟಲಿ ಪತ್ರ

ಮೀನುಗಾರರ ಹತ್ಯೆ ಆರೋಪ ಎದುರಿಸುತ್ತಿರುವ ಇಟಲಿ ನೌಕಾಪಡೆ ಸಿಬ್ಬಂದಿ ಭಾರತಕ್ಕೆ ಬರುವುದಿಲ್ಲ ಎಂದು ಇಟಲಿ ಸರ್ಕಾರ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

Srinivasa Murthy VN
Updated On : 12 Mar 2013, 4:51 am

ನವದೆಹಲಿ: ಮೀನುಗಾರರ ಹತ್ಯೆ ಆರೋಪ ಎದುರಿಸುತ್ತಿರುವ ಇಟಲಿ ನೌಕಾಪಡೆ ಸಿಬ್ಬಂದಿ ಭಾರತಕ್ಕೆ ಬರುವುದಿಲ್ಲ ಎಂದು ಇಟಲಿ ಸರ್ಕಾರ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

ಕೇರಳದಲ್ಲಿ ನಡೆದ ಭಾರತೀಯ ಮೀನುಗಾರರ ಹತ್ಯೆಗೆ ಸಂಬಂಧಿಸಿದಂತೆ ಕೇರಳ ಪೊಲೀಸರಿಂದ ಬಂಧಿತರಾಗಿದ್ದ ಇಬ್ಬರು ಇಟಲಿ ನೌಕಾಪಡೆ ಸಿಬ್ಬಂದಿ ವಿಚಾರಣೆಗಾಗಿ ಭಾರತಕ್ಕೆ ಬರುವುದಿಲ್ಲ ಎಂದು ಇಟಲಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಇಟಲಿ ಸರ್ಕಾರದ ಪತ್ರದಿಂದಾಗಿ ಕೆರಳಿರುವ ಕೇರಳ ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ಪ್ರತಿಪಕ್ಷ ಬಿಜೆಪಿ ಕೂಡ ಮೀನುಗಾರರ ಹತ್ಯೆ ಆರೋಪಿಗಳನ್ನು ಭಾರತಕ್ಕೆ ಕರೆತರುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ ಈ ಸಂಬಂಧ ಭಾರತದಲ್ಲಿರುವ ಇಟಲಿ ರಾಯಭಾರ ಕಚೇರಿಗೆ ಸಮನ್ಸ್ ನೀಡಲು ಮುಂದಾಗಿದೆ. ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಅವರು ಇಟಲಿ ಸರ್ಕಾರದ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಇಟಲಿ ಸರ್ಕಾರದ ನಿರ್ಧಾರ ಒಪ್ಪತಕ್ಕುದಲ್ಲ. ಕೊಲೆ ಆರೋಪ ಎದುರಿಸುತ್ತಿರುವ ತಮ್ಮ ದೇಶದ ನಾಗರಿಕರನ್ನು ವಿಚಾರಣೆ ಸಂಬಂಧ ಭಾರತಕ್ಕೆ ಕಳುಹಿಸಿಕೊಡುವುದು ಅದರ ಕರ್ತವ್ಯ'ವೆಂದು ಅಭಿಪ್ರಾಯಪಟ್ಟಿದ್ದಾರೆ.

ಅಂತೆಯೇ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರು ಮಾತನಾಡಿ, ಭಾರತೀಯ ಮೀನುಗಾರರ ಹತ್ಯೆ ಆರೋಪ ಎದುರಿಸುತ್ತಿರುವ ಇಟಲಿ ನೌಕಾಪಡೆ ಸಿಬ್ಬಂದಿಯನ್ನು ಶೀಘ್ರದಲ್ಲಿಯೇ ಭಾರತಕ್ಕೆ ಕರೆತರಲಾಗುತ್ತದೆ. ಈ ಕುರಿತು ಈಗಾಗಲೇ ಇಟಲಿ ಸರ್ಕಾರದೊಂದಿಗೆ ನಮ್ಮ ಅಧಿಕಾರಿಗಳು ಚರ್ಚೆ ನಡೆಸಲು ಮುಂದಾಗಿದ್ದಾರೆ ಎಂದು ಕೇರಳ ಮೀನುಗಾರರಿಗೆ ಭರವಸೆ ನೀಡಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ದಾರಿ ತಪ್ಪಿ ಕೇರಳ ಬಂದರಿಗೆ ಬಂದಿದ್ದ ಇಟಲಿಯ ನೌಕಾ ಪಡೆಯ ಸಿಬ್ಬಂದಿ, ಕಡಲ್ಗಳ್ಳರೆಂದು ಭಾವಿಸಿ ಕೇರಳದ ಇಬ್ಬರು ಮೀನುಗಾರರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಭಾರತೀಯ ನೌಕಾಪಡೆಯ ಅಧಿಕಾರಿಗಳು ಮತ್ತು ಪೊಲೀಸರು ಗುಂಡಿಕ್ಕಿದ ಇಟಲಿ ನೌಕಾಪಡೆಯ ಇಬ್ಬರು ಸಿಬ್ಬಂದಿಗಳನ್ನು ಬಂಧಿಸಿದ್ದರು. ವಿಚಾರಣೆ ನಡೆಯುತ್ತಿದ್ದ ವೇಳೆ ಕ್ರಿಸ್‌ಮಸ್ ನೆಪವೊಡ್ಡಿದ ಸಿಬ್ಬಂದಿಗಳು, ಸುಪ್ರೀಂಕೋರ್ಟ್‌ನಿಂದ ವಿಶೇಷ ಅನುಮತಿ ಪಡೆದು ಇಟಲಿಗೆ ವಾಪಸಾಗಿದ್ದರು. ಇದೀಗ ವಿಚಾರಣೆಗಾಗಿ ತಾವು ಭಾರತಕ್ಕೆ ಬರುವುದಿಲ್ಲ ಎಂದು ಸರ್ಕಾರದ ಮುಖಾಂತರ ಭಾರತಕ್ಕೆ ಪತ್ರ ರವಾನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement