ಯುಪಿಎಸ್ಸಿ ಪರೀಕ್ಷಾ ವಿಧಾನ ಸರಿಯಿಲ್ಲ: ಚಂದ್ರು ಆಕ್ರೋಶ
ಯುಪಿಎಸ್ಸಿ ಪರೀಕ್ಷಾ ನಿಯಮದಲ್ಲಿ ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಕೇಂದ್ರೀಯ ನಾಗರೆಕ ಸೇವಾ ಆಯೋಗದ ಪರೀಕ್ಷಾ ವಿಧಾನ ಸರಿಯಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುಪಿಎಸ್ಸಿ ಪರೀಕ್ಷಾ ನಿಯಮದಲ್ಲಿ ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರ, ಬದಲಾವಣೆ ಕುರಿತು ಎಲ್ಲ ರಾಜ್ಯಗಳಿಗೂ ಇಂದು ನೋಟಿಫಿಕೇಶನ್ ಕಳುಹಿಸಿದೆ. ಕೇಂದ್ರಸರ್ಕಾರ ನೋಟಿಫಿಕೇಶನ್ ಕುರಿತು ನವದೆಹಲಿಯ ಕರ್ನಾಟಕ ಭವನದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಮುಖ್ಯಮಂತ್ರಿ ಚಂದ್ರು ಪರೀಕ್ಷಾ ನಿಯಾಮವಳಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
"ಸರ್ಕಾರದ ನಿರ್ಧಾರ ಪ್ರಾದೇಶಿಕ ಭಾಷೆಗಳನ್ನು ಕೊಲ್ಲುವ ಪ್ರಯತ್ನವಾಗಿದೆ. ಯುಪಿಎಸ್ಸಿ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷೆಗಳ ಕನಿಷ್ಟ 25 ಮಂದಿ ಅಭ್ಯರ್ಥಿಗಳಿದ್ದರೆ ಮಾತ್ರ ಪರೀಕ್ಷೆಗೆ ಅವಕಾಶ ನೀಡಿರುವುದು ಸರ್ಕಾರದ ಏಕಪಕ್ಷೀಯ ನಿರ್ಧಾರವಾಗಿದೆ. ಇದರಿಂದ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳನ್ನು ಹೊರತು ಪಡಿಸಿ ಉಳಿದ ಪ್ರಾದೇಶಿಕ ಭಾಷೆಗಳನ್ನು ಸಾಯಿಸುವ ಪ್ರಯತ್ನವಾಗಿದ್ದು, ಈ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆಯುತ್ತೇನೆ" ಎಂದು ಚಂದ್ರು ಅಭಿಪ್ರಾಯಪಟ್ಟರು.
ಕೇಂದ್ರಸರ್ಕಾರ ನೂತನ ನಿಯಮಕ್ಕೆ ಕರ್ನಾಟಕ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಿಂದಲೂ ವಿರೋಧ ವ್ಯಕ್ತವಾಗಿದೆ. ಮಹಾರಾಷ್ಟ್ರದಲ್ಲಿ ಎಂಇಎಸ್ ಮತ್ತು ಎಂಎನ್ಎಸ್ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇದೊಂದು ಜನವಿರೋಧಿ ಧೋರಣೆ ಎಂದು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಕಿಡಿಕಾರಿದ್ದಾರೆ. ಅಂತೆಯೇ ತಮಿಳುನಾಡಿನಲ್ಲಿ ಎಐಡಿಎಂಕೆ ಮತ್ತು ಡಿಎಂಕೆ ಪಕ್ಷಗಳು ಒಗ್ಗಟ್ಟಾಗಿ ಕೇಂದ್ರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕೇಂದ್ರ ಸರ್ಕಾರ ಹೊರಡಿಸಿರುವ ನೂತನ ನಿಯಮದ ಪ್ರಕಾರ ಪದವಿಯಲ್ಲಿ ಪ್ರಾದೇಶಿಕ ಭಾಷೆಯನ್ನು ಐಚ್ಛಿಕವಾಗಿ ಪಡೆದಿರುವ ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆ ಬರೆಯಬಹುದು. ಆದರೆ ಪರೀಕ್ಷೆಗೆ ಕನಿಷ್ಟ 25 ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರಬೇಕು. ಅಭ್ಯರ್ಥಿಗಳ ಸಂಖ್ಯೆ 24 ಇದ್ದರೂ ಸಹ ಪರೀಕ್ಷೆಗೆ ಅವಕಾಶವಿಲ್ಲ. ಹೀಗಾಗಿ ನೂತನ ಪರೀಕ್ಷಾ ನಿಯಮ ಹಲವು ರಾಜ್ಯಗಳ ವಿರೋಧಕ್ಕೆ ಕಾರಣವಾಗಿದೆ.