ವಾಪಸ್ ಕಳಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ: ಪ್ರಧಾನಿ ಎಚ್ಚರಿಕೆ
ಆರೋಪಿಗಳನ್ನು ಭಾರತಕ್ಕೆ ಕಳುಹಿಸದಿದ್ದರೆ ಮುಂದಾಗುವ ಪರಿಣಾಮಗಳಿಗೆ ಇಟಲಿಯೇ ಹೊಣೆ: ಪ್ರಧಾನಿ ಸಿಂಗ್ ಎಚ್ಚರಿಕೆ
ನವದೆಹಲಿ: ಮೀನುಗಾರರ ಹತ್ಯೆ ಪ್ರಕರಣದ ಆರೋಪಿಗಳಾಗಿರುವ ಇಟಲಿ ನೌಕಾಪಡೆಯ ಸಿಬ್ಬಂದಿಗಳು ವಿಚಾರಣೆ ಎದುರಿಸಲು ಭಾರತಕ್ಕೆ ವಾಪಸಾಗದಿದ್ದರೆ ಇದರ ಪರಿಣಾಮವನ್ನು ಇಟಲಿ ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಎಚ್ಚರಿಸಿದ್ದಾರೆ.
ಪ್ರಕರಣ ಕುರಿತಂತೆ ಇಂದು ಸಂಸತ್ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮನಮೋಹನ್ ಸಿಂಗ್, ಅವರು(ಇಟಲಿ) ಅಂತಾರಾಷ್ಟ್ರೀಯ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಇದರಿಂದ ಉಭಯ ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಇಟಲಿಯ ಧೋರಣೆ ಒಪ್ಪಲಾಗದ್ದು, ಮೀನುಗಾರರ ಹತ್ಯೆ ಪ್ರಕರಣದ ಆರೋಪಿಗಳನ್ನು ಮಾರ್ಚ್ 22 ರೊಳಗೆ ವಿಚಾರಣೆಗಾಗಿ ಭಾರತಕ್ಕೆ ಕಳುಹಿಸದಿದ್ದರೆ ಮುಂದಾಗುವ ಎಲ್ಲ ಪರಿಣಾಮಗಳಿಗೆ ಇಟಲಿಯೇ ಹೊಣೆಯಾಗಲಿದೆ ಎಂದು ಕಿಡಿಕಾರಿದ್ದಾರೆ.
ಕೇರಳದಲ್ಲಿ ನಡೆದ ಮೀನುಗಾರರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಉಭಯ ಸದನಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಇಟಲಿ ನೌಕಾಪಡೆಯ ಇಬ್ಬರು ಸಿಬ್ಬಂದಿಗಳು ಕ್ರಿಸ್‌ಮಸ್ ನೆಪವೊಡ್ಡಿ ಕಳೆದ ಡಿಸೆಂಬರ್‌ನಲ್ಲಿ ಸುಪ್ರೀಂಕೋರ್ಟ್‌ನಿಂದ ವಿಶೇಷ ಅನುಮತಿ ಪಡೆದು ಇಟಲಿಗೆ ಹಾರಿದ್ದರು. ಆದರೆ ಕ್ರಿಸ್‌ಮಸ್ ಕಳೆದು ತಿಂಗಳಾದರೂ ಅವರು ಭಾರತಕ್ಕೆ ವಾಪಸಾಗಿರಲಿಲ್ಲ. ಈ ನಡುವೆ ಇಟಿಲಿ ಸರ್ಕಾರ ತನ್ನ ಸಿಬ್ಬಂದಿಗಳು ಭಾರತಕ್ಕೆ ಬರುವುದಿಲ್ಲವೆಂದು ಭಾರತಕ್ಕೆ ಪತ್ರ ರವಾನಿಸಿದೆ.
ಇಟಲಿ ಸರ್ಕಾರದ ನಿಲುವು ಭಾರತದಲ್ಲಿ ತೀವ್ರ ಆಕ್ರೋಶಕ್ಕೆ ತುತ್ತಾಗಿದೆ. ಕೇರಳದಲ್ಲಿ ಮೀನುಗಾರರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಸ್ವತಃ ಪ್ರಧಾನಿಗಳೇ ಇಟಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವುದು ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.