ಪೆಟ್ರೋಲ್ 1 ರು.ಇಳಿಕೆ, ಡೀಸೆಲ್ 50 ಪೈ. ಏರಿಕೆ
ಇತ್ತೀಚೆಗೆ ಗಗನಕ್ಕೇರಿದ್ದ ಪೆಟ್ರೋಲ್ ದರ ಇದೀಗ 1 ರು. ಇಳಿಕೆಯಾಗುವ ಸಾಧ್ಯತೆ ಇದ್ದು, ಡೀಸೆಲ್ ಬೆಲೆ ಮಾತ್ರ ಮತ್ತೆ 50 ಪೈಸೆ ಏರಿಕೆಯಾಗಲಿದೆ.
ನವನದೆಹಲಿ: ಇತ್ತೀಚೆಗೆ ಗಗನಕ್ಕೇರಿದ್ದ ಪೆಟ್ರೋಲ್ ದರ ಇದೀಗ 1 ರು. ಇಳಿಕೆಯಾಗುವ ಸಾಧ್ಯತೆ ಇದ್ದು, ಡೀಸೆಲ್ ಬೆಲೆ ಮಾತ್ರ ಮತ್ತೆ 50 ಪೈಸೆ ಏರಿಕೆಯಾಗಲಿದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರದಲ್ಲಿ ಇಳಿಕೆ ಕಂಡಿದ್ದು, ಇದರ ಪರಿಣಾಮವಾಗಿ ಭಾರತದಲ್ಲಿಯೂ ಪೆಟ್ರೋಲ್ ದರ ಇಳಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ತೈಲೋತ್ಪನ್ನ ಸಂಸ್ಥೆಗಳ ಜೊತೆ ಕೇಂದ್ರ ಸರ್ಕಾರ ಚರ್ಚೆ ನಡೆಸುತ್ತಿದ್ದು, ನಾಳೆ ಅಧಿಕೃತವಾಗಿ ಪ್ರಕಟಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರ 2 ಬಾರಿ ತೈಲೋತ್ಪನ್ನಗಳ ಬೆಲೆ ಏರಿಸಿ, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುವಂತೆ ಮಾಡಿತ್ತು. ಇದೀಗ ಪೆಟ್ರೋಲ್ ದರ ಇಳಿಕೆಯಾಗುತ್ತಿರುವುದು ಗ್ರಾಹಕರಲ್ಲಿ ಕೊಂಚ ಸಮಾಧಾನ ತಂದಿದೆ. ಆದರೆ ಡೀಸೆಲ್ ಬೆಲೆ ಮಾತ್ರ ತಿಂಗಳಿಗೆ 50 ಪೈಸೆ ಏರಿಕೆಯಾಗುತ್ತಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.