ಯೂರೋಪ್ ಬೆಂಬಲ ಕೋರಿದ ಭಾರತ
ಮೀನುಗಾರರ ಹತ್ಯೆ ಕುರಿತು ಇಟಲಿ ಧೋರಣೆ ಖಂಡಿಸಿರುವ ಭಾರತ ಪ್ರಕರಣದ ಇತ್ಯರ್ಥಕ್ಕಾಗಿ ಯೂರೋಪ್ ಒಕ್ಕೂಟದ ಬೆಂಬಲ ಕೋರಿದೆ.
ನವದೆಹಲಿ: ಮೀನುಗಾರರ ಹತ್ಯೆ ಕುರಿತು ಇಟಲಿ ಧೋರಣೆ ಖಂಡಿಸಿರುವ ಭಾರತ ಪ್ರಕರಣದ ಇತ್ಯರ್ಥಕ್ಕಾಗಿ ಯೂರೋಪ್ ಒಕ್ಕೂಟದ ಬೆಂಬಲ ಕೋರಿದೆ.
ಹತ್ಯೆ ಪ್ರಕರಣದ ಕುರಿತು ಇಟಲಿ ಸರ್ಕಾರದ ಧೋರಣೆ ವಿರುದ್ಧ ಭಾರತ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಪಡೆಯಲು ಯತ್ನಿಸುತ್ತಿದೆ. ಯೂರೋಪಿಯನ್ ಒಕ್ಕೂಟದ ಬೆಂಬಲಕ್ಕೆ ಮುಂದಾಗಿರುವ ಭಾರತ, ಇದಕ್ಕಾಗಿ ವಿದೇಶಾಂಗ ಇಲಾಖೆಯ ಮೂಲಕ ತನ್ನ ಪ್ರಯತ್ನ ನಡೆಸುತ್ತಿದೆ. ಪ್ರಕರಣದ ಆರೋಪಿಗಳಾದ ಇಟಲಿ ನೌಕಾದಳ ಸಿಬ್ಬಂದಿಗಳನ್ನು ಭಾರತಕ್ಕೆ ವಾಪಸ್ ರವಾನಿಸದ ಇಟಲಿ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿಯೂ ಆಕ್ರೋಶ ವ್ಯಕ್ತವಾಯಿತು.
ಪ್ರತಿಪಕ್ಷಗಳು ಇಟಲಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿ, ಆರೋಪಿಗಳನ್ನು ಭಾರತಕ್ಕೆ ವಾಪಸ್ ಕರೆಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದವು. ಈ ನಡುವೆ ಇಟಲಿ ಸರ್ಕಾರ ಧೋರಣೆಯನ್ನು ಖಂಡಿಸಿರುವ ಕೇಂದ್ರ ಸರ್ಕಾರ ಭಾರತದಲ್ಲಿರುವ ಇಟಲಿ ರಾಯಭಾರಿಗೆ ಸಮನ್ಸ್ ಜಾರಿಮಾಡಿದೆ. ಭಾರತದ ಟೀಕೆಗೆ ಉತ್ತರಿಸಿರುವ ಇಟಲಿಯ ವಿದೇಶಾಂಗ ಸಚಿವ ಗ್ವಿಲಿಯೋ ಟರ್ಜಿ, ನಾವು ಅಂತಾರಾಷ್ಟ್ರೀಯ ನಿಯಮಾವಳಿಗಳ ಅನ್ವಯವೇ ನಡೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ವಿಚಾರಣೆ ಸಂಬಂಧ ಆರೋಪಿಗಳನ್ನು ಭಾರತಕ್ಕೆ ರವಾನಿಸಬೇಕು ಎಂಬ ಭಾರತದ ಆಗ್ರಹ ಒಂದೆಡೆಯಾದರೆ, ತನ್ನ ದೇಶದ ಪ್ರಜೆಗಳ ಬೆನ್ನಿಗೆ ನಿಂತಿರುವ ಇಟಲಿಯ ಮೊಂಡುವಾದ ಮತ್ತೊಂದೆಡೆಯಾಗಿದೆ. ಒಟ್ಟಾರೆ ಕೇರಳದಲ್ಲಿ ನಡೆದ ಮೀನುಗಾರರ ಹತ್ಯೆ ಪ್ರಕರಣ ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುವತ್ತ ಸಾಗಿದೆ.