ಪೆಟ್ರೋಲ್ ಬೆಲೆ 2 ರು. ಇಳಿಕೆ
ಇತ್ತೀಚೆಗೆ ಗಗನಕ್ಕೇರಿದ್ದ ಪೆಟ್ರೋಲ್ ದರ ಇದೀಗ 2 ರು. ಇಳಿಕೆಯಾಗಿದೆ. ಡೀಸೆಲ್ ಬೆಲೆ ಮಾತ್ರ ಮತ್ತೆ 50 ಪೈಸೆ ಏರಿಕೆಯಾಗಲಿದೆ.
ನವದೆಹಲಿ: ಇತ್ತೀಚೆಗೆ ಗಗನಕ್ಕೇರಿದ್ದ ಪೆಟ್ರೋಲ್ ದರ ಇದೀಗ 2 ರು. ಇಳಿಕೆಯಾಗಿದೆ. ಡೀಸೆಲ್ ಬೆಲೆ ಮಾತ್ರ ಮತ್ತೆ 50 ಪೈಸೆ ಏರಿಕೆಯಾಗಲಿದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರದಲ್ಲಿ ಇಳಿಕೆ ಕಂಡಿದ್ದು, ಇದರ ಪರಿಣಾಮವಾಗಿ ಭಾರತದಲ್ಲಿಯೂ ಪೆಟ್ರೋಲ್ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ನಿನ್ನೆ ಮೂಲಗಳು ತಿಳಿಸಿದ್ದವು. ಈ ಕುರಿತು ಕೇಂದ್ರ ಸರ್ಕಾರ ಕೂಡ ತೈಲೋತ್ಪನ್ನ ಸಂಸ್ಥೆಗಳ ಜೊತೆ ಚರ್ಚೆ ನಡೆಸಿತ್ತು. ಇದರ ಪರಿಣಾಮವಾಗಿ ಪೆಟ್ರೋಲ್ ಬೆಲೆಯಲ್ಲಿ 2 ರು. ಇಳಿಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಇಳಿಕೆ ದರ ಪ್ರಮಾಣ ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 2.62 ರುಪಾಯಿ ಇಳಿಕೆ ಮಾಡಲಾಗಿದೆ. ಉಳಿದಂತೆ ಚೆನ್ನೈನಲ್ಲಿ 2.54 ರು, ಮುಂಬಯಿನಲ್ಲಿ 2.62, ಕೋಲ್ಕತಾ 2.50, ದೆಹಲಿಯಲ್ಲಿ 2.40 ರುಪಾಯಿ ಇಳಿಕೆ ಮಾಡಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಯಾಗಲಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರ 2 ಬಾರಿ ತೈಲೋತ್ಪನ್ನಗಳ ಬೆಲೆ ಏರಿಸಿ, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುವಂತೆ ಮಾಡಿತ್ತು. ಇದೀಗ ಪೆಟ್ರೋಲ್ ದರ ಇಳಿಕೆಯಾಗಿರುವುದರಿಂದ ಗ್ರಾಹಕರಲ್ಲಿ ಕೊಂಚ ಸಮಾಧಾನ ತಂದಿದೆ.