ನಾನು ರಾಜ್ಯಾಧ್ಯಕ್ಷ ಹುದ್ದೆಯ ಹಿಂದೆ ಬಿದ್ದಿಲ್ಲ: ಸದಾನಂದ ಗೌಡ
ಮಂಗಳೂರು: ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಹಿಂದೆ ಬಿದ್ದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಸದಾನಂದಗೌಡ ಅವರು, 'ತಾವು ರಾಜ್ಯಾಧ್ಯಕ್ಷ ಹುದ್ದೆಯ ಹಿಂದೆ ಬಿದ್ದಿಲ್ಲ. ತಾವು ರಾಜ್ಯಾಧ್ಯಕ್ಷ ಸ್ಥಾನದ ಹಿಂದೆ ಬಿದ್ದಿದ್ದೇವೆ ಎಂಬ ಕೆಜೆಪಿ ನಾಯಕರ ಟೀಕೆಗೆ ಉತ್ತರಿಸುವುದಿಲ್ಲ' ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಆಯ್ಕೆ ವಿಳಂಬವಾಗುತ್ತಿರುವ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, "ನಮ್ಮ ಪಕ್ಷದ ರಾಷ್ಟ್ರಾಧ್ಯಕ್ಷರಾದ ರಾಜ್ನಾಥ್ ಸಿಂಗ್ ಅವರು ವಾರಣಾಸಿಯಲ್ಲಿದ್ದಾರೆ. ಹೀಗಾಗಿ ಆಯ್ಕೆ ಕಾರ್ಯ ವಿಳಂಬವಾಗುತ್ತಿದೆ. ಪಕ್ಷದ ಹಿರಿಯರು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ" ಎಂದು ಸದಾನಂದಗೌಡ ಹೇಳಿದರು.
ಬಿಜೆಪಿಗೆ ಬಿಎಸ್ವೈ ವಾಪಸಾಗುತ್ತಾರೆ ಎಂಬ ಸಚಿವ ಸೋಮಣ್ಣ ಅವರ ಹೇಳಿಕೆಯ ಬಗ್ಗೆ ಉತ್ತರಿಸಿದ ಸದಾನಂದಗೌಡರು, ಸೋಮಣ್ಣ ಮಾತಿನಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ನನಗೆ ತಿಳಿದಿಲ್ಲ ಎಂದು ವ್ಯಂಗ್ಯವಾಗಿ ಉತ್ತರಿಸಿದರು.