ಸರಬ್ಜಿತ್ ಕಿಡ್ನಿ, ಹೃದಯ ನಾಪತ್ತೆ: ವೈದ್ಯರ ಹೇಳಿಕೆ
ಸರಬ್ಜಿತ್ ಸಿಂಗ್ ಅವರ ದೇಹದಲ್ಲಿ ಕಿಡ್ನಿ ಮತ್ತು ಹೃದಯ ಭಾಗಗಳು ನಾಪತ್ತೆಯಾಗಿವೆ ಎಂದು ಅಮೃತಸರ ವೈದ್ಯರು ತಿಳಿಸಿದ್ದಾರೆ.
ಅಮೃತಸರ: ಸಹ ಖೈದಿಗಳಿಂದ ಹಲ್ಲೆಗೊಳಗಾಗಿ ಮೃತಪಟ್ಟಿದ್ದ ಭಾರತೀಯ ಮೂಲದ ಸರಬ್ಜಿತ್ ಸಿಂಗ್ ಅವರ ದೇಹದಲ್ಲಿ ಕಿಡ್ನಿ ಮತ್ತು ಹೃದಯ ಭಾಗಗಳು ನಾಪತ್ತೆಯಾಗಿವೆ ಎಂದು ಅಮೃತಸರ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಇಂದು ಭಾರತಕ್ಕೆ ತರಲಾದ ಸರಬ್ಜಿತ್ ಸಿಂಗ್ ಅವರ ಮೃತ ದೇಹವನ್ನು ಕುಟುಂಬ ಸದಸ್ಯರ ಒತ್ತಾಯದ ಮೇರೆಗೆ 2 ನೇ ಬಾರಿಗೆ ಮರಣೋತ್ತರ ಪರೀಕ್ಷೆಗೊಳಪಡಿಸಿದ ಅಮೃತಸರ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು ಸ್ಫೋಟಕ ಮಾಹಿತಿಗಳನ್ನು ಹೊರಹಾಕಿದ್ದಾರೆ.
ಈ ಬಗ್ಗೆ ಇಂದು ಅಮೃತಸರದಲ್ಲಿ ಸುದ್ದಿಗೋಷ್ಠಿ ನಡೆಸಿದ ವೈದ್ಯರು, ಸರಬ್ಜಿತ್ ಸಿಂಗ್ ಅವರ ದೇಹದ ಮೇಲೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಕೊಲ್ಲಲೆಂದೇ ಹಲ್ಲೆ ನಡೆಸಿದಂತಿದೆ. ಅವರ ಎದೆಯ ಭಾಗದ ಬಹುತೇಕ ಎಲುಬುಗಳು ಮುರಿದಿದ್ದು, ತಲೆಗೆ ಕಠಿಣವಾದ ವಸ್ತು ಅಂದರೆ ಕಲ್ಲಿನಂತಹ ವಸ್ತುಗಳಿಂದ ನಾಲ್ಕೈದು ಬಾರಿ ಹೊಡೆಯಲಾಗಿದೆ. ಅಂತೆಯೇ ಅವರ ದವಡೆಯ ವಸಡುಗಳು ಮತ್ತು ಮೂಳೆ ಕೂಡ ಮುರಿದಿತ್ತು. ದೇಹದ ಹಲವೆಡೆ ಮೊನಚಾದ ವಸ್ತುಗಳಿಂದ ಇರಿಯಲಾಗಿತ್ತು ಎಂದು ಹೇಳಿದ್ದಾರೆ.
ಆದರೆ ಇದಕ್ಕಿಂತಲೂ ಅಮಾನವೀಯ ಘಟನೆ ಎಂದರೆ ಸರಬ್ಜಿತ್ ಸಿಂಗ್ ಅವರ ದೇಹದಲ್ಲಿ ಕಿಡ್ನಿ ಮತ್ತು ಹೃದಯ ಭಾಗಗಳು ನಾಪತ್ತೆಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಸರಬ್ಜಿತ್ರನ್ನು ಆಸ್ಪತ್ರೆಗೆ ದಾಖಲು ಮಾಡಿರುವ ಸಂದರ್ಭದಲ್ಲಿ ಅವರ ಕಿಡ್ನಿ ಮತ್ತು ಹೃದಯವನ್ನು ಕಳವು ಮಾಡಿರುವ ಕುರಿತು ವೈದ್ಯರು ಸಂಶಯ ವ್ಯಕ್ತಪಡಿಸಿದ್ದಾರೆ.
ಸರಬ್ಜಿತ್ ಸಿಂಗ್ ಅವರ ಕಿಡ್ನಿ ಮತ್ತು ಹೃದಯ ನಾಪತ್ತೆ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ಪಂಜಾಬ್ನಲ್ಲಿ ಸಿಖ್ಖರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೃತ ದೇಹದ ಭಾಗಗಳನ್ನು ಕದ್ದಿರುವ ಜಿನ್ನಾ ಆಸ್ಪತ್ರೆಯ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಸರಬ್ಜಿತ್ ಸಿಂಗ್ ಅವರ ಮೇಲಿನ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಭಾರತ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಪಾಕಿಸ್ತಾನದ ಕೋಟ್ ಲಕಪತ್ ಜೈಲಿನಲ್ಲಿ ಕಳೆದ ಏಪ್ರಿಲ್ 26 ರಂದು ಭಾರತೀಯ ಮೂಲದ ಖೈದಿ ಸರಬ್ಜಿತ್ ಸಿಂಗ್ ಮೇಲೆ 6 ಜನ ಸಹ ಖೈದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಲಾಹೋರ್ನ ಜಿನ್ನಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸರಬ್ಜಿತ್ ಸಿಂಗ್ ಅವರು ಮೃತಪಟ್ಟಿದ್ದರು. ಇಂದು ಅವರ ಪಾರ್ಥೀವ ಶರೀರವನ್ನು ಸ್ವದೇಶಕ್ಕೆ ತರಲಾಗಿದ್ದು, ಪಂಜಾಬ್ನ ಅಮೃತಸರದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ 2ನೇ ಬಾರಿಗೆ ಮರಣೋತ್ತರ ಪರೀಕ್ಷೆ ನಡೆಸಲಾಯಿತು.