ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸರಬ್ಜಿತ್ ಹತ್ಯೆ: ಜಮ್ಮುವಿನಲ್ಲಿ ಪಾಕ್ ಖೈದಿ ಮೇಲೆ ಹಲ್ಲೆ

ಪಾಕ್‌ನಲ್ಲಿ ಸರಬ್ಜಿತ್ ಸಿಂಗ್ ಹತ್ಯೆಯ ಪ್ರತೀಕಾರವಾಗಿ ಭಾರತದ ಜಮ್ಮು ಮತ್ತು ಕಾಶ್ಮೀರದ ಜೈಲಿನಲ್ಲಿ ಪಾಕ್ ಖೈದಿಯ ಮೇಲೆ...

Srinivasa Murthy VN
Updated On : 3 May 2013, 1:15 am

ಶ್ರೀನಗರ: ಪಾಕ್‌ನಲ್ಲಿ ಸರಬ್ಜಿತ್ ಸಿಂಗ್ ಹತ್ಯೆಯ ಪ್ರತೀಕಾರವಾಗಿ ಭಾರತದ ಜಮ್ಮು ಮತ್ತು ಕಾಶ್ಮೀರದ ಜೈಲಿನಲ್ಲಿ ಪಾಕ್ ಮೂಲದ ಖೈದಿಯ ಮೇಲೆ ಹಲ್ಲೆ ನಡೆಸಲಾಗಿದೆ.

ನಿನ್ನೆ ತಡ ರಾತ್ರಿಯಲ್ಲಿ ಕೋಟ್ ಬಲ್ವಾಲ್ ಜೈಲಿನಲ್ಲಿ ನಡೆದ ಈ ಹಲ್ಲೆಯಲ್ಲಿ ಪಾಕಿಸ್ತಾನ ಮೂಲದ ಸನಾವುಲ್ಲಾ ಹಕ್ ಎಂಬ ಖೈದಿ ತೀವ್ರವಾಗಿ ಹಲ್ಲೆಗೊಳಗಾಗಿದ್ದಾನೆ. ಸುಮಾರು ಆರೇಳು ಮಂದಿ ಖೈದಿಗಳು ಸನಾವುಲ್ಲಾ ಮೇಲೆ ಒಮ್ಮೆಲೆ ದಾಳಿ ಮಾಡಿ, ಆತನನ್ನು ತೀವ್ರವಾಗಿ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸನಾವುಲ್ಲಾ ಹಕ್‌ನನ್ನು ಸಮೀಪದ ಜಮ್ಮು ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತೀವ್ರವಾಗಿ ಗಾಯಗೊಂಡಿರುವ ಸನಾವುಲ್ಲಾ ಹಕ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಶೇಷ ವಿಮಾನದ ಮೂಲಕ ಚಂಡೀಗಡದ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸನಾವುಲ್ಲಾ ಹಕ್ ಮೇಲೆ ಹಲ್ಲೆ ನಡೆಸಿದ ಸಹ ಖೈದಿಗಳು ಭಾರತೀಯ ಸೇನಾಪಡೆಯ ಮಾಜಿ ಸೈನಿಕರೆಂದು ತಿಳಿದುಬಂದಿದೆ. ಹಲ್ಲೆಗೊಳಗಾದ ಸನಾವುಲ್ಲಾ ಹಕ್ ಮೂಲತಃ ಪಾಕಿಸ್ತಾನದ ಸಿಯಾಲ್‌ಕೋಟ್‌ನವನು. ಕಳೆದ 15 ವರ್ಷಗಳಿಂದ ಸನಾವುಲ್ಲಾ ಹಕ್ ಜಮ್ಮವಿನ ಕೋಟ್ ಬಲ್ವಾಲ್ ಜೈಲಿನಲ್ಲಿದ್ದಾನೆ ಎಂದು ತಿಳಿದು ಬಂದಿದ್ದು, ಆತನಿಗೆ ಸುಮಾರು 65 ವರ್ಷ ವಯಸ್ಸಾಗಿತ್ತು.

ಹಲ್ಲೆ ನಡೆಸಿದ ಖೈದಿಗಳನ್ನು ಬೇರೆ ಕೊಠಡಿಗಳಿಗೆ ರವಾನಿಸಲಾಗಿದ್ದು, ಭಾರಿ ಭದ್ರತೆ ಇರುವ ಕೋಟ್ ಬಲ್ವಾಲ್ ಜೈಲಿನಲ್ಲಿ ಸುಮಾರು 70 ಮಂದಿ ಪಾಕಿಸ್ತಾನದ ಯೋಧರು ಸೇರಿದಂತೆ ಸುಮಾರು 600 ಮಂದಿ ಖೈದಿಗಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಮ್ಮು ಮತ್ತು ಕಾಶ್ಮೀರ ಸರ್ಕಾರ, ತನಿಖೆಗೆ ಆದೇಶಿಸಿದ್ದು, ಜೈಲು ಅಧೀಕ್ಷಕ ರಜನಿ ಸೆಹಗಲ್ ಅವರಿಗೆ ತನಿಖೆಯ ಜವಾಬ್ದಾರಿ ವಹಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement