ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಿ.ಕೆ. ಬನ್ಸಾಲ್ ನಿವಾಸದೆದುರು ಪ್ರತಿಭಟನೆ

ರೈಲ್ವೇ ಸಚಿವ ಪಿ.ಕೆ ಬನ್ಸಾಲ್ ಅವರ ಚಂಡೀಗಡ ನಿವಾಸದ ಎದುರು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಅವರ ರಾಜಿನಾಮೆಗೆ ಆಗ್ರಹಿಸುತ್ತಿದ್ದಾರೆ.

Srinivasa Murthy VN
Updated On : 5 May 2013, 3:29 am

ನವದೆಹಲಿ: ರೈಲ್ವೇ ಸಚಿವ ಪಿ.ಕೆ ಬನ್ಸಾಲ್ ಅವರ ಚಂಡೀಗಡ ನಿವಾಸದ ಎದುರು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಅವರ ರಾಜಿನಾಮೆಗೆ ಆಗ್ರಹಿಸುತ್ತಿದ್ದಾರೆ.

ಬನ್ಸಾಲ್ ಅವರ ಚಂಡೀಗಡ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿರುವ ನೂರಾರು ಎಬಿವಿಪಿ ಕಾರ್ಯಕರ್ತರು ರೈಲ್ವೆ ಸಚಿವರ ರಾಜಿನಾಮೆಗೆ ಆಗ್ರಹಿಸುತ್ತಿದ್ದಾರೆ. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದು, ಪ್ರತಿಭಟನಾ ನಿರತರನ್ನು ಚದುರಿಸಲು ಲಾಠಿ ಪ್ರಹಾರ ಮಾಡುತ್ತಿದ್ದಾರೆ. ಪೊಲೀಸ್ ಕ್ರಮವನ್ನು ಖಂಡಿಸುತ್ತಿರುವ ಪ್ರತಿಭಟನಾ ನಿರತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಘಟನೆಯಲ್ಲಿ ಹಲವು ಪೊಲೀಸರು ಸೇರಿದಂತೆ ಹತ್ತಕೂ ಹೆಚ್ಚು ಮಂದಿ ಎಬಿವಿಪಿ ಕಾರ್ಯಕರ್ತರು ಗಾಯೊಗೊಂಡಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಪಡೆದಿರುವ ಪೊಲೀಸರು, ಪ್ರತಿಭಟನಾ ನಿರತ ಕಾರ್ಯಕರ್ತರನ್ನು ಚದುರಿಸುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸುರಕ್ಷತಾ ಕ್ರಮವಾಗಿ ಬನ್ಸಾಲ್ ಅವರ ನಿವಾಸದ ಸುತ್ತಮುತ್ತ ನಿಷೇಧಾಜ್ಞೆ ಜಾರಿಮಾಡಲಾಗಿದೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳು ಆಗಮಿಸಿ, ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

ಕರ್ನಾಟಕ ಚುನಾವಣೆ ನಂತರ ಬನ್ಸಾಲ್ ನಿರ್ಧಾರ ಪ್ರಕಟ
ತಮ್ಮ ಸೋದರಳಿಯನ ಲಂಚ ಪ್ರಕರಣದಿಂದ ವಿಪಕ್ಷಗಳಿಂದ ತೀವ್ರ ವಿರೋಧ ಎದುರಿಸುತ್ತಿರುವ ರೇಲ್ವೆ ಸಚಿವ ಪಿ.ಕೆ. ಬನ್ಸಾಲ್ ಅವರು ಕರ್ನಾಟಕ ವಿಧಾನಸಭೆ ಚುನಾವಣೆ ನಂತರ ತಮ್ಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ನಿನ್ನೆ ಸಂಜೆ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದೆಹಲಿ ನಿವಾಸದಲ್ಲಿ ಭೇಟಿ ಮಾಡಿದ್ದ ಬನ್ಸಾಲ್ ಅವರು ಸುಮಾರು ಅರ್ಧಗಂಟೆಗೂ ಅಧಿಕ ಸಮಯ ಚರ್ಚಿಸಿದ್ದಾರೆ. ಮೂಲಗಳ ಪ್ರಕಾರ ಬನ್ಸಾಲ್ ಅವರು ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಂದ ಬೇಸತ್ತಿದ್ದು, ರಾಜಿನಾಮೆ ನೀಡಲೆಂದೇ ಪ್ರಧಾನಿಗಳನ್ನು ಭೇಟಿ ಮಾಡಿದ್ದರು. ಆದರೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಬನ್ಸಾಲ್ ಅವರ ಮನವೊಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಬನ್ಸಾಲ್ ಅವರ ಸೋದರಳಿಯ ವಿಜಯ್ ಸಿಂಗ್ಲಾ ಎಂಬುವವರನ್ನು ರೇಲ್ವೇ ಅಧಿಕಾರಿ ಮನೋಜ್ ಕುಮಾರ್ ಎಂಬುವವರ ಬಡ್ತಿಗಾಗಿ 90 ಲಕ್ಷ ರು.ಲಂಚ ಪಡೆದ ಆರೋಪದ ಮೇಲೆ ಬಂಧಿಸಲಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರತಿಪಕ್ಷಗಳು ಸಚಿವ ಬನ್ಸಾಲ್ ಅವರ ರಾಜಿನಾಮೆಗೆ ಪಟ್ಟು ಹಿಡಿದಿವೆ. ಇತ್ತ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ನಡೆದ ಕಾಂಗ್ರೆಸ್ ಕೋರ್ ಕಮಿಟಿ ಸಭೆ ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement