ಮತಯಂತ್ರದ ಟೇಬಲನ್ನೇ 3 ಬಾರಿ ತಿರುಗಿಸಿದ ರೇವಣ್ಣ
ಎಚ್.ಡಿ. ರೇವಣ್ಣ ಮತದಾನ ಮಾಡುವ ಸಂದರ್ಭದಲ್ಲಿ ಮತಯಂತ್ರ ವಿರುವ ಟೇಬಲನ್ನೇ ಮೂರು ಬಾರಿ ತಿರುಗಿಸಿ ಮತದಾನ ಮಾಡಿದ್ದಾರೆ.
ಹಾಸನ: ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಅವರು ಭಾನುವಾರ ಹಾಸನ ಜಿಲ್ಲೆಯಲ್ಲಿ ಮತದಾನ ಮಾಡುವ ಸಂದರ್ಭದಲ್ಲಿ ಮತಯಂತ್ರ ವಿರುವ ಟೇಬಲನ್ನೇ ಮೂರು ಬಾರಿ ತಿರುಗಿಸಿ ಮತದಾನ ಮಾಡಿದ್ದಾರೆ.
ಹಾಸನ ಜಿಲ್ಲೆಯಲ್ಲಿ ತಮ್ಮ ಮತ ಹಾಕಲು ದೇವೇಗೌಡರೊಂದಿಗೆ ಆಗಮಿಸಿದ್ದ ರೇವಣ್ಣ ಅವರು ಮತ ಹಾಕುವ ಸಂದರ್ಭದಲ್ಲಿ ಮತ ಯಂತ್ರವನ್ನು 3 ಬಾರಿ ತಿರುಗಿಸಿ ಮತ ಹಾಕಿದ್ದಾರೆ. ರೇವಣ್ಣ ಅವರ ಈ ಕೃತ್ಯದಿಂದಾಗಿ ಸ್ಥಳದಲ್ಲಿದ್ದ ಚುನಾವಣಾ ಸಿಬ್ಬಂದಿಗಳೇ ಕಕ್ಕಾಬಿಕ್ಕಿಯಾಗಿದ್ದು ಕಂಡುಬಂದಿತು. ಆರಂಭದಲ್ಲಿ ಬೆಳಕಿಗಾಗಿ ಅವರು ಟೇಬಲನ್ನು ತಿರುಗಿಸುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಯಾವಾಗ ರೇವಣ್ಣ ಅವರು 3 ಬಾರಿ ತಿರುಗಿಸಿದಾಗ ವಾಸ್ತುಶಾಸ್ತ್ರದ ಮೇಲಿನ ನಂಬಿಕೆಯಿಂದಾಗಿ ಅವರು ಟೇಬಲನ್ನು ತಿರುಗಿಸಿದ್ದಾರೆ ಎಂದು ತಿಳಿಯಿತು.
ಮೌಢ್ಯ ಮೆರೆದೆ ಮಾಜಿ ಪ್ರಧಾನಿ, ಕಾರಿನಲ್ಲಿಯೇ ಸ್ತೋತ್ರ ಪಠಣ
ಇದೇ ಸಂದರ್ಭದಲ್ಲಿ ಮತದಾನ ಮಾಡಲು ತಮ್ಮ ಪತ್ನಿ ಚೆನ್ನಮ್ಮ ಅವರೊಂದಿಗೆ ಹಾಸನ ಜಿಲ್ಲೆಗೆ ಆಗಮಿಸಿದ್ದ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಕಾರಿನಲ್ಲಿಯೇ ಕುಳಿತಿದ್ದರು. ರಾಹುಕಾಲ ಕಳೆದ ನಂತರವೇ ಅವರು ಕಾರಿನಿಂದ ಇಳಿದು ಮತಗಟ್ಟೆಯ ಒಳ ಪ್ರವೇಶಿಸಿದರು. ಸುಮಾರು ಅರ್ಧಗಂಟೆಗಳ ಕಾಲ ಕಾರಿನಲ್ಲಿಯೇ ಕುಳಿತಿದ್ದು ಗೌಡರು ದೇವರ ನಾಮ ಮತ್ತು ಮಂತ್ರವನ್ನು ಪಠಿಸುತ್ತಿದುದು ಕಂಡುಬಂತು.