ನೀತಿ ಸಂಹಿತೆ ಉಲ್ಲಂಘನೆ: ಶಾಸಕರ ಬಂಧನ, ಬಿಡುಗಡೆ
ರಾಯಚೂರು: ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಡಿಯಲ್ಲಿ ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಅವರನ್ನು ಪೊಲೀಸರು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಮತದಾನದ ದಿನ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯ ದೇವದುರ್ಗದ ಗಬ್ಬೂರು ಠಾಣೆಯಲ್ಲಿ ಶಾಸಕ ಶಿವನಗೌಡ ನಾಯಕ್ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಮತದಾನದ ವೇಳೆ ಮತಗಟ್ಟೆಗೆ ಆಗಮಿಸಿದ್ದ ಶಾಸಕರು ಮತದಾರರನ್ನು ಓಲೈಸಿಕೊಳ್ಳುವ ಪ್ರಯತ್ನ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಶಿವನಗೌಡ ನಾಯಕ್ ಅವರ ನಡವಳಿಕೆಯನ್ನು ಖಂಡಿಸಿದ್ದ ದೇವದುರ್ಗದ ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲಿಗರು ಅವರ ವಿರುದ್ಧ ಮತಗಟ್ಟೆಯಲ್ಲಿ ಪ್ರಚಾರ ಮಾಡಿದರು ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಗಬ್ಬೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಶಿವನಗೌಡ ನಾಯಕ್ ಅವರನ್ನು ಬಂಧಿಸಿದ್ದರು. ನಂತರ ಶಾಸಕರ ಪರ ವಕೀಲರು ಠಾಣೆಗೆ ಆಗಮಿಸಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿಕೊಂಡು ಕರೆದೊಯ್ದರು.