ಬಾಂಗ್ಲಾದಲ್ಲಿ ಗಲಭೆ: 28ಕ್ಕೂ ಹೆಚ್ಚು ಸಾವು
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆಯಿಂದಾಗಿ ಕನಿಷ್ಟ 28 ಮಂದಿ ಸಾವಿಗೀಡಾಗಿದ್ದು, 100 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಢಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆಯಿಂದಾಗಿ ಕನಿಷ್ಟ 28 ಮಂದಿ ಸಾವಿಗೀಡಾಗಿದ್ದು, 100 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಾಂಗ್ಲಾದೇಶದಲ್ಲಿ ಧರ್ಮನಿಂದನೆಯ ವಿರೋಧಿ ಕಾನೂನು ಜಾರಿಗೆ ತರುವ ವಿಚಾರದಲ್ಲಿ ಆರಂಭಗೊಂಡ ಪ್ರತಿಭಟನೆ ನಿನ್ನೆ ಹಿಂಸಾಚಾರಕ್ಕೆ ತಿರುಗಿತ್ತು. ಪೊಲೀಸರು ಮತ್ತು ಪ್ರತಿಭಟನಾಕಾರರು ನಡುವೆ ನಡೆದ ಸಂಘರ್ಷದಲ್ಲಿ ಒಟ್ಟು 25 ಮಂದಿ ಬಲಿಯಾಗಿದ್ದು, ಸುಮಾರು 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬಾಂಗ್ಲಾದೇಶವನ್ನು ಇಸ್ಲಾಂ ರಾಷ್ಟ್ರವೆಂದು ಪರಿಗಣಿಸಿ, ಇಸ್ಲಾಂ ಧರ್ಮನಿಂದನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು 'ಧರ್ಮನಿಂದನೆ ವಿರೋಧಿ' ಕಾನೂನನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಢಾಕಾ ಹೊರವಲಯದ ಕಾಂಚ್‌ಪುರದಲ್ಲಿ ಆರಂಭಗೊಂಡಿದ್ದ ಪ್ರತಿಭಟನೆ ಇದೀಗ ರಾಜಧಾನಿಯಾದ್ಯಂತ ಆವರಿಸುತ್ತಿದೆ. ಬಾಂಗ್ಲಾದೇಶದ ಪ್ರಮುಖ ಇಸ್ಲಾಮಿಕ್ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸುಮಾರು 70 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾಂಚ್‌ಪುರ್‌ನಲ್ಲಿ ಪೊಲೀಸರು, ಅರೆ ಸೇನಾಪಡೆಯ ಸಿಬ್ಬಂದಿಗಳು ಸೇರಿದಂತೆ ಒಟ್ಟು 8 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಅಂತೆಯೇ ಢಾಕಾದ ವಾಣಿಜ್ಯ ಪ್ರದೇಶವಾದ ಮೊತಿಝೀಲ್‌ನಲ್ಲಿ 7 ಜನರು ಮೃತಪಟ್ಟಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿರುವ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ, ರಸ್ತೆಯಲ್ಲಿ ನಿಲ್ಲಿಸಿರುವ ದ್ವಿ ಚಕ್ರವಾಹನಗಳು ಮತ್ತು ಕಾರುಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಅಂತೆಯೇ ಟೈರ್‌ಗಳಿಗೆ ಬೆಂಕಿ ಹಚ್ಚುವ ಮೂಲಕ ರಕ್ಷಣಾ ಸಿಬ್ಬಂದಿಗಳ ದಿಕ್ಕು ತಪ್ಪಿಸುತ್ತಿದ್ದಾರೆ. ಪ್ರತಿಭಟನಾಕಾರರನ್ನು ಮಣಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಅಶ್ರುವಾಯು ಪ್ರಯೋಗ, ಜಲಫಿರಂಗಿ, ಅತ್ಯಾಧುನಿಕ ಭಾರಿ ಶಬ್ದ ಹೊರಸೂಸುವ ಯಂತ್ರಗಳು ಮತ್ತು ರಬ್ಬರ್‌ಗುಂಡುಗಳನ್ನು ಬಳಸಿ ಪ್ರತಿಭಟನಾಕಾರರನ್ನು ನಿಯಂತ್ರಿಸುವ ಕಾರ್ಯ ಮಾಡುತ್ತಿದ್ದಾರೆ.
ಆದರೆ ಪೊಲೀಸರ ಯಾವುದೇ ಕ್ರಮಕ್ಕೂ ಬಗ್ಗದ ಪ್ರತಿಭಟನಾಕಾರರು ಬದಲಿಗೆ ಪೊಲೀಸರ ಮೇಲೆಯೇ ಇಟ್ಟಿಗೆ, ಕಲ್ಲು, ಕಬ್ಬಿಣದ ರಾಡ್‌ಗಳು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸುತ್ತಿದ್ದಾರೆ. ರಾಜಧಾನಿ ಢಾಕಾದಾದ್ಯಂತ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ನಿಷೇಧಾಜ್ಞೆ ಜಾರಿಮಾಡಲಾಗಿದೆ. ಅಲ್ಲದೆ ಮನೆಗಳಲ್ಲಿ, ಕಚೇರಿಗಳಲ್ಲಿರುವ ಜನರು ಹೊರಗೆ ಬಾರದಂತೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.